ಮೆಟ್ರೋ ವಿಳಂಬಕ್ಕೆ ಮೋದಿ ಕಾರಣ?; ಜನರು ಸಾಯುತ್ತಿದ್ದರೆ, ಸರ್ಕಾರ ಜಾಹೀರಾತು ನೀಡಿ ಚೆಲ್ಲಾಟ ಅಡುತ್ತಿದೆ!

ಇಡೀ ದೇಶವೇ ಕೊರೊನಾ ಎರಡನೇ ಅಲೆಯ ಭೀಕತೆಯನ್ನು ಎದುರಿಸುತ್ತಿದೆ. ರಾಜ್ಯದಲ್ಲಿಯೂ ಕೊರೊನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳು, ವೆಂಟಿಲೇಟರ್‌ಗಳ ಕೊರತೆ ಇದೆ ಎಂದು ಕೇಳಿರುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಲವಾರು ರಾಷ್ಟ್ರೀಯ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುತ್ತಿದ್ದು, ಪ್ರಚಾರ ಪಡೆದುಕೊಳ್ಳುತ್ತಿದೆ. ಸರ್ಕಾರದ ಈ ನಡೆ ವಿಕ್ಷಗಳು ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.

ಕೇಂದ್ರ ಸರ್ಕಾರವು “ಬೆಂಗಳೂರು ಮೆಟ್ರೋ ಹಂತ II ಎ ಮತ್ತು II ಬಿ ಗೆ (ಬೆಂಗಳೂರಿನ ಏರ್‌ಪೋರ್ಟ್-ಕೆ.ಆರ್ ಪುರಂ- ಸಿಲ್ಕ್‌ಬೋರ್ಡ್ ಮೆಟ್ರೋ ಮಾರ್ಗ) ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದಕ್ಕಾಗಿ ರಾಜ್ಯದ ಬಿಜೆಪಿ ಸರ್ಕಾರ ಮೋದಿಯವರಿಗೆ ಧನ್ಯವಾದ ಹೇಳುವುದಕ್ಕಾಗಿ ರಾಜ್ಯ ಸರ್ಕಾರ ವಿವಿಧ ಪತ್ರಿಕೆಗಳಮುಖಪುಟದಲ್ಲಿ ಪೂರ್ಣ ಪ್ರಮಾಣದ ಜಾಹೀರಾತುಗಳನ್ನು ನೀಡಿದೆ. ಇದರ ವಿರುದ್ದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿಬಂದಿದ್ದು, ಈ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಮೋದಿಯವರೆ ಹೊಣೆಯೇ?, ಜನ ಸಂಕಷ್ಟದಲ್ಲಿರುವಾಗ ಜಾಹೀರಾತಿಗೆ ಕೋಟಿ ರೂ ಖರ್ಚು ಏಕೆ? ಎಂಬ ಪ್ರಶ್ನೆಗಳು ಎದ್ದಿವೆ.

ರಾಜ್ಯ ಸರ್ಕಾರವು 3 ವರ್ಷಗಳ ಹಿಂದೆಯೇ (ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ) ಈ ಮಾರ್ಗಗಳನ್ನು ಅನುಮೋದಿಸಿ, ಭೂಸ್ವಾಧೀನವನ್ನು ಪೂರ್ಣಗೊಳಿಸಿತು ಮತ್ತು ಟೆಂಡರ್ ಸಹ ಮಾಡಿತು. ಆದರೆ ಕೇಂದ್ರ ಕ್ಯಾಬಿನೆಟ್ ಅನುಮೋದನೆಗಾಗಿ ಇಷ್ಟು ದಿನ ಏಕೆ ಕಾಯಬೇಕಾಯಿತು, ಇಷ್ಟು ವರ್ಷ ಏಕೆ ತಡೆಹಿಡಿಯಿತು ಎಂದು ಹಲವರು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರು ನೀಡಿರುವ ಜಾಹೀರಾತಿನಲ್ಲಿ 5 ವರ್ಷಗಳಲ್ಲಿ ಪೂರೈಸುವ ಈ ಯೋಜನೆಗೆ 14,778 ಕೋಟಿ ರೂಗಳಿಗೆ ಅನುಮೋದನೆ ನೀಡಿದೆ ಎಂದು ಘೋಷಿಸಿದ್ದಾರೆ. ಅದು ಮೆಟ್ರೋದ 2ಎ ಮತ್ತು 2ಬಿಯ ಒಟ್ಟು ಯೋಜನಾ ವೆಚ್ಚವಾಗಿದೆ. ಅಂದರೆ ಬೆಂಗಳೂರು ಮೆಟ್ರೋ ಹಂತ 2 (ಎ) ಮತ್ತು 2 (ಬಿ) ಯೋಜನೆಯ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮತ್ತು ಕೆ.ಆರ್.ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 58.19 ಕಿ.ಮೀ ವಿಸ್ತರಣೆಗೆ 14,788 ಕೋಟಿ ರೂ. ಒಟ್ಟು ಯೋಜನಾ ವೆಚ್ಚ. ಇದರ ಪೂರ್ತಿ ಹಣವನ್ನು ಕೇಂದ್ರ ಸರ್ಕಾರ ನೀಡುವುದಿಲ್ಲ. ಕೇಂದ್ರ ಸಣ್ಣ ಪಾಲನ್ನಷ್ಟೇ ನೀಡುತ್ತದೆ. ರಾಜ್ಯಗಳೇ ಹೆಚ್ಚಿನ ಪಾಲು ಭರಿಸಿದರೂ ಅದರ ಕ್ರೆಡಿಟ್‌ ಅನ್ನು ಕೇಂದ್ರ ಸರ್ಕಾರಕ್ಕೆ ಏಕೆ ನೀಡಬೇಕು ಎಂಬ ಪ್ರಶ್ನೆಗಳು ಸಹ ಎದ್ದಿವೆ.

ಇದರಲ್ಲಿ ಕೇಂದ್ರ ಸರ್ಕಾರವು ನೇರ ಅನುದಾನವನ್ನಾಗಿ ಶೇಕಡಾ 15 ರಷ್ಟನ್ನು ನೀಡುತ್ತದೆ. ಶೇ. 35 ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಿದರೆ, ಶೇ.35 ರಷ್ಟು ಹಣವನ್ನು ಕೇಂದ್ರ ಸರ್ಕಾರದ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಅಭಿವೃದ್ಧಿ ಸಂಸ್ಥೆಗಳ ಮೂಲಕ ಸಾಲ ಪಡೆಯಬೇಕಾಗಿದೆ. ಉಳಿದ ಶೇ.15 ರಷ್ಟು ಹಣವನ್ನು ಖಾಸಗಿ ವಲಯದಿಂದ ಸಂಗ್ರಹಿಸಲಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವಿವರವಾದ ವರದಿ ಮಾಡಿದೆ.

“ಹಲವು ವರ್ಷಗಳಿಂದ ಈ ಯೋಜನೆ ಅನುಮೋದನೆಗಾಗಿ ಕಾಯುತ್ತಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಬೆಂಗಳೂರು ಮೆಟ್ರೋ ಹಂತ II ಎ ಮತ್ತು II ಬಿ ಮಾರ್ಗಕ್ಕಾಗಿ ಬೇಕಾಗುವ ಹಣದಲ್ಲಿ ಶೇ.50 ಅನುದಾವನ್ನು ಕೇಂದ್ರ ಸರ್ಕಾರ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿರಲಿಲ್ಲ. ಈಗಲೂ ತಾನು ಕೊಡಬೇಕಾದ ಪಾಲನ್ನು ಕೇಂದ್ರ ಸರ್ಕಾರ ಕೊಡುತ್ತದೆ ಎಂಬುದರಲ್ಲಿ ನಂಬಿಕೆಯಿಲ್ಲ. ಇನ್ನು ಈ ಯೋಜನೆಗಾಗಿ ಸಾಲ ಮಾಡುವುದರಲ್ಲಿ ಎಷ್ಟನ್ನು ಕೇಂದ್ರ ಸರ್ಕಾರ ತೀರಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಕುರಿತು ಯಡಿಯೂರಪ್ಪನವರು ಸಾರ್ವಜನಿಕರಿಗೆ ಪಾರದಾರ್ಶಕ ಮಾಹಿತಿ ನೀಡಬೇಕೆಂದು” ಅರುಣ್ ಜಾವಗಲ್ ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಯವರು ಈ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇಂದು ನಾವು ಸಾವಿನ ಮನೆಯಲ್ಲಿದ್ದೇವೆ. ಇಂತಹ ಸಮಯದಲ್ಲಿ ರಾಜ್ಯಸರ್ಕಾರ ಮೆಟ್ರೋಗೆ ಕೇಂದ್ರ ಸರ್ಕಾರ ಹಣ ನೀಡುತ್ತಿದೆ ಎಂದು ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದೆ ಎಂದರೆ ಈ ಸರ್ಕಾರಕ್ಕೆ ಇನ್ನು ಬುದ್ದಿ ಬಂದಿಲ್ಲ ಎಂದರ್ಥ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜಾಹೀರಾತುಗಳ ಅವಶ್ಯಕತೆ ಇದೆಯೇ ಎಂಬುದನ್ನು ಈ ಮುರ್ಖ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಬೆಡ್‌ಗಳಿಲ್ಲ, ಆಕ್ಸಿಜನ್, ಔ‍‍ಷಧಿ ಕೊರತೆಯಿಂದ ಜನ ಸಾಯುತ್ತಿರುವ ಪರಿಸ್ಥಿತಿಯಲ್ಲಿ ಜಾಹೀರಾತು ನೀಡುವ ಮೂಲಕ ಸಾವಿನ ಮನೆಯ ಜನರೊಂದಿಗೆ ಚೆಲ್ಲಾಟವಾಡುತ್ತಿದ್ದೀರಿ” ಎಂದು ಕಿಡಿಕಾರಿದ್ದಾರೆ.

ಇನ್ನು ಈ ಯೋಜನೆಗೆ ದೇಶಾದ್ಯಂತ ರಾಜ್ಯ ಸರ್ಕಾರದ ಹಣದಲ್ಲಿ ಜಾಹೀರಾತು ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಅವರು, ಒಂದು ಕಡೆ ಸರಕಾರದ ಬಳಿ ದುಡ್ಡಿಲ್ಲ ಅಂತಾರೆ, ಇನ್ನೊಂದು ಕಡೆ ಪುಟಗಟ್ಟಲೇ ಜಾಹಿರಾತು ನೀಡ್ತಾರೆ. ಕೇಂದ್ರ ಸರಕಾರ ಕರ್ನಾಟಕದ ಯೋಜನೆಗೆ ದುಡ್ಡು ಕೊಡೋದು ನಾವು ಕೊಟ್ಟ ತೆರಿಗೆ ಹಣದಿಂದಲೇ. ಅಕಸ್ಮಾತ್ ನಿಮಗೆ ಏನಾದ್ರೂ ಧನ್ಯವಾದ ಹೇಳಬೇಕು ಅಂದ್ರೆ ನಿಮ್ಮ ಸ್ವಂತ ದುಡ್ಡಲ್ಲಿ ಜಾಹಿರಾತು ನೀಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ 22 ಕೊರೊನಾ ರೋಗಿಗಳ ಸಾವು; ಅಪರಿಚಿತರ ವಿರುದ್ದ FIR ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights