ಮಾಸ್ಕ್ ಕೊಳ್ಳಲು ಹಣವಿಲ್ಲ; ಹಕ್ಕಿಯ ಗೂಡನ್ನೇ ಮುಖಕ್ಕೆ ಧರಿಸಿ ಸರ್ಕಾರಿ ಕಚೇರಿಗೆ ಬಂದ ವೃದ್ಧ
ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ. ಹೀಗಾಗಿ ತೆಲಂಗಾಣದ ಗ್ರಾಮವೊಂದರ ನಿವಾಸಿಯಾಗಿರುವ ಕುರಿಗಾಹಿಯೊಬ್ಬರಿಗೆ ಫೇಸ್ ಮಾಸ್ಕ್ ಕೊಳ್ಳಲು ಕೈಯಲ್ಲಿ ಹಣವಿಲ್ಲದೇ ಹಕ್ಕಿಯ ಗೂಡನ್ನು ಹಾಕಿಕೊಂಡು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೆಲಂಗಾಣ ಸರ್ಕಾರ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ರೆ 1 ಸಾವಿರ ರೂಪಾಯಿ ದಂಡ ವಿಧಿಸುತ್ತಿದೆ. ಹೀಗಾಗಿ, ಮಾಸ್ಕ್ ಖರೀದಿಸಲೂ ಹಣವಿಲ್ಲದ ಮೆಹಬೂಬಾನಗರ ಜಿಲ್ಲೆಯ ಚಿನ್ನಮುನುಗಲ್ ಚಡ್ನ ನಿವಾಸಿಯಾಗಿರುವ ಮೇಕಲಾ ಕರ್ಮಯ್ಯಾ ಎಂಬವರು ಹಕ್ಕಿಯ ಗೂಡನ್ನೇ ಮಾಸ್ಕ್ ರೀತಿಯಲ್ಲಿ ಹಾಕಿಕೊಂಡು ಬಂದಿದ್ದಾರೆ.
ತಮ್ಮ ಪಿಂಚಣಿ ಹಣವನ್ನ ಸಂಗ್ರಹ ಮಾಡೋಕೆ ಮಂಡಲ್ ಆಫೀಸಿಗೆ ಭೇಟಿ ನೀಡಿದ್ದ ಅವರಿಗೆ ಸರ್ಕಾರಿ ಕಚೇರಿಗಳಿಗೆ ಮಾಸ್ಕ್ ಇಲ್ಲದೇ ಪ್ರವೇಶವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಅವರು ಮಾಸ್ಕ್ ಬದಲಿಗೆ ಮುಖಕ್ಕೆ ಹಕ್ಕಿಯ ಗೂಡನ್ನ ಹಾಕಿಕೊಂಡು ಬರುವ ಮೂಲಕ ಸುದ್ದಿಯಾಗಿದ್ದಾರೆ.
ವೈದ್ಯಕೀಯ ತಜ್ಞರು ಕೊರೊನಾ ವೈರಸ್ ವಿರುದ್ಧ ಫೇಸ್ ಮಾಸ್ಕ್ಗಳ ಬಳಕೆ ತುಂಬಾನೇ ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ವಿಶ್ವದ ಬಹುತೇಕ ಎಲ್ಲಾ ಕಡೆ ಫೇಸ್ ಮಾಸ್ಕ್ಗಳನ್ನ ಜನರಿಗೆ ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ: ಕೊರೊನಾ 2ನೇ ಅಲೆ: ಭಾರತದ ಪ್ರಯಾಣಿಕರಿಗೆ ನಿತ್ಯಾನಂದನ ‘ಕೈಲಾಸ’ ದೇಶಕ್ಕೆ ನೋ ಎಂಟ್ರಿ!

