ಫ್ಯಾಕ್ಟ್‌ಚೆಕ್: ನಟಿ ಐಂದ್ರಿಲಾ ಶರ್ಮಾಳ ಮೃತ ದೇಹಕ್ಕೆ ನಟನೊಬ್ಬ ತಾಳಿ ಕಟ್ಟಿದ್ದು ನಿಜವೇ?

ಬಂಗಾಳಿ ಕಿರುತೆರೆಯ ಜನಪ್ರಿಯ ನಟಿ 24 ವರ್ಷದ ಐಂದ್ರಿಲಾ ಶರ್ಮಾ ಅವರ ಸಾವಿನ ಹಿನ್ನಲೆಯಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಹೃದಯಾಘಾತದಿಂದ ಬಳಲುತ್ತಿದ್ದ ಶರ್ಮಾ, ನವೆಂಬರ್ 20 ರಂದು ಹೌರಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ‘ಜುಮುರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಐಂದ್ರಿಲಾ ನಂತರ ‘ಜಿಬೋನ್ ಜ್ಯೋತಿ’ ಮತ್ತು ‘ಜಿಯೋನ್ ಕತ್ತಿ’ ಚಿತ್ರಗಳಲ್ಲಿ ಅಭಿನಯಿಸಿದರು. ಅವರು ಕೆಲವು ಒಟಿಟಿಯ ವೆಬ್‌ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದರು.

2015 ರಿಂದ ಎವಿಂಗ್ಸ್ ಸಾರ್ಕೋಮಾದ ಎಂಬ ಮಾರಣಾಂತಿಕ ಕ್ಯಾನ್ಸರ್‌ ಮತ್ತು ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದ ಆಕೆಯನ್ನು ನವೆಂಬರ್ 1 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಂದ್ರಿಲಾ ಶರ್ಮಾ ಅವರ ಗೆಳೆಯ ನಟ ಸಬ್ಯಸಾಚಿ ಚೌಧರಿ ಅವರು ನಟಿಗೆ ನಿರಂತರ ಬೆಂಬಲವಾಗಿದ್ದರು ಮತ್ತು ಅನೇಕ ಸಂದರ್ಭಗಳಲ್ಲಿ ಅವರ ಪ್ರೀತಿಯನ್ನು ವ್ಯಕ್ತಪಡಿಸಿದ್ದರು ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ನಟಿ ಐಂದ್ರಿಲಾ ಶರ್ಮಾ ಅವರ ಸಾವಿನ ನಂತರ ಆಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸಬ್ಯಸಾಚಿ ಚೌಧರಿ, ಐಂದ್ರಿಲಾ ಶರ್ಮಾ ಅವರ ಮೃತ ದೇಹಕ್ಕೆ ಸಿಂಧೂರ ಇಟ್ಟು, ಹೂ ಮಾಲೆ ಹಾಕಿ ಹಣೆಗೆ ಮುತ್ತಿಡುತ್ತಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ವಿಡಿಯೊವನ್ನು ಪರಿಶೀಲಿಸಿದಾಗ ಕಮೆಂಟ್‌ನಲ್ಲಿ ಬಂದ ಪ್ರತಿಕ್ರಿಯೆಯಲ್ಲಿ ಒಬ್ಬರು ಇದು ಅಸ್ಸಾಂನ ಘಟನೆ ಎಂದು ಹೇಳಿದ್ದಾರೆ. ಇದರ ಕ್ಲೂ ತೆಗೆದುಕೊಂಡು, ಸಂಬಂಧಿತ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ನವೆಂಬರ್ 19, 2022 ರಂದು ಅದೇ ವೀಡಿಯೊವನ್ನು ಹೊಂದಿರುವ ETV ಭಾರತ್ ಸುದ್ದಿ ಲೇಖನ ಕಂಡುಬಂದಿದೆ. “ತನ್ನ ಜೀವದ ಗೆಳತಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಗೆಳತಿಯ ಮೃತದೇಹಕ್ಕೆ ಸಿಂಧೂರ ಮತ್ತು ಹೂ ಮಾಲೆಯನ್ನು ಹಾಕಿ ಮದುವೆಯಾಗುತ್ತಾನೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಮೃತ ಪ್ರಾರ್ಥನಾ ಬೋರಾ ಕುಟುಂಬದ ಪ್ರಕಾರ, ಬಿಟುಪನ್ ಮತ್ತು ಪ್ರಾರ್ಥನಾ ಬೋರಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ಮನೆಯವರಿಗೂ ಇಬ್ಬರ ಪ್ರೀತಿಯ ಬಗ್ಗೆ ಒಪ್ಪಿಗೆ ಇದ್ದರಿಂದ ಇಬ್ಬರ ಮದುವೆಯೂ ನಿಶ್ಚಯವಾಗಿತ್ತು, ಆದರೆ ಪ್ರಾರ್ಥನಾಳ ಅಕಾಲಿಕ ಸಾವು ಎಲ್ಲರ ಕನಸಿಗೂ ತಣ್ಣೀರೆರಚಿತು. ಆದರೂ ತನ್ನ ಪ್ರೀತಿಯ ಸಂಕೇತವಾಗಿ ಬಿಟುಪನ್ ತನ್ನ ಗೆಳತಿ ಸಾವಿನ ನಂತರ ಆಕೆಯ ಮೃತ ದೇಹಕ್ಕೆ ಸಿಂಧೂರ, ಮಾಲೆ ಹಾಕುವ ಮೂಲಕ ಮದುವೆ ಆಗುವ ಮನ ಮಿಡಿಯುವ ಘಳಿಗೆಗೆ ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ.

Thumbnail image

ಮೃತ ಪ್ರಾರ್ಥನಾ ಸೋದರ ಸಂಬಂಧಿ ಸುಭೋನ್ ಮಾತನಾಡಿ ಬಿಟುಪನ್ ಅವಳನ್ನು ಮದುವೆಯಾಗುವುದಾಗಿ ಘೋಷಿಸಿದನು. ಇದು ನಮ್ಮ ಕಲ್ಪನೆಗೆ ನಿಲುಕದ ಕಾರಣ ನಾವು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಯಾರಾದರೂ ನನ್ನ ತಂಗಿಯನ್ನು ಇಷ್ಟು ಆಳವಾಗಿ ಪ್ರೀತಿಸಬಹುದೇ ಎಂದು ನಾವು ಆಶ್ಚರ್ಯ ಪಡುತ್ತಿದ್ದೆವು. ಆದರೆ ಇಲ್ಲಿ ನಾವು ಇದಕ್ಕೆ ಸಾಕ್ಷಿಯಾಗಿದ್ದೇವೆ ಎಂದಿದ್ದಾರೆ.

“ಮದುವೆ”ಯ ಸಂಪೂರ್ಣ ಪ್ರಕ್ರಿಯೆಯಲ್ಲಿ, ಬಿಟುಪನ್ ಅಳುತ್ತಾ ಎಲ್ಲಾ ವಿಧಿವಿಧಾನಗಳನ್ನು ನಡೆಸಿದ್ದಾನೆ. ನನ್ನ ಸಹೋದರಿ ನಿಜವಾಗಿಯೂ ಅದೃಷ್ಟಶಾಲಿ. ಅವಳು ಬಿಟುಪನ್ನ ಸಂಗಾತಿಯಾಗಲು ಬಯಸಿದ್ದಳು, ಅವಳ ಕೊನೆಯ ಆಸೆಯನ್ನು ಪೂರೈಸಿದ್ದಾನೆ. ನಾನು ಇನ್ನೇನು ಹೇಳಲಿ, ಪ್ರೀತಿಯ ಕಾರ್ಯದಿಂದ ಇಡೀ ಕುಟುಂಬವು ಭಾವುಕರಾದರು ಎಂದು ಸುಭೋನ್ ಹೇಳಿದ್ದಾರೆ” ಎಂದು ಇಂಡಿಯಾ ಟುಡೇ NE ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನವೆಂಬರ್ 18 ರಂದು ಮಾರಣಾಂತಿಕ ಕಾಯಿಲೆಯಿಂದ ಯುವತಿಯೊಬ್ಬಳು ಸಾವನ್ನಪ್ಪಿದ ಕಾರಣ ಬಿಟುಪಾನ್ ತನ್ನ ಪ್ರೇಮಿಯ ಕನಸುಗಳನ್ನು ಈಡೇರಿಸುವ ಸಲುವಾಗಿ, ಪ್ರಾರ್ಥನಾ ಅವರ ಹಣೆಯ ಮೇಲೆ ಸಿಂಧೂರವನ್ನು ಹಚ್ಚಿ, ಅವಳ ಮೃತ ದೇಹಕ್ಕೆ ಮಾಲೆಯನ್ನು ಹಾಕಿ ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾನೆ. ಈ ಘಟನೆಯು ಅಸ್ಸಾಂನ ನಾಗಾವ್ ಜಿಲ್ಲೆಯ ರಹಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಆದರೆ ಇದೇ ಸಂದರ್ಭದಲ್ಲಿ ಸಾವನಪ್ಪಿದ ನಟಿ ಐಂದ್ರಿಲಾ ಶರ್ಮಾ ಅವರ ಸಾವಿನೊಂದಿಗೆ ಲಿಂಕ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್ 

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸ್ವಂತ ಮಗಳನ್ನೆ ಕೊಂದ ಅಪ್ಪ ! ಹೇಳಿದ್ದು ಮಾತ್ರ ಲವ್ ಜಿಹಾದ್‌


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.