ರಜೆ ಇಲ್ಲದೆ ಪೊಲೀಸ್ ಠಾಣೆಯ ಮುಂದೆ ಹಳದಿ ಕಾರ್ಯಕ್ರಮ ಮಾಡಿಕೊಂಡ ಮಹಿಳಾ ಕಾನ್ಸ್ಟೆಬಲ್!
ರಜೆ ಇಲ್ಲದ ಕಾರಣ ಮಹಿಳಾ ಕಾನ್ಸ್ಟೆಬಲ್ ಒಬ್ಬರು ಪೊಲೀಸ್ ಠಾಣೆಯ ಮುಂದೆ ಹಳದಿ ಕಾರ್ಯಕ್ರಮ ಮಾಡಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಕೊರೊನಾ ತಡೆಗೆ ಪಣ ತೊಟ್ಟಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ಪೊಲೀಸರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜೀವವನ್ನೇ ಪಣಕ್ಕಿಟ್ಟು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಒಂದು ದಿನವೂ ಬಿಡುವಿಲ್ಲದೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಜನರು ಅಗತ್ಯವಿರುವ ಎಲ್ಲ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಕೊರೊನಾ 2ನೇ ಅಲೆ ಅಧಿಕಾರಿಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ. ಈ ಮಧ್ಯೆ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದಾಗಿ ರಾಜಸ್ಥಾನದ ಮಹಿಳಾ ಕಾನ್ಸ್ಟೆಬಲ್ ರಜೆ ಪಡೆಯಲು ಸಾಧ್ಯವಾಗದೆ ತನ್ನ ಹಲ್ದಿ ಸಮಾರಂಭವನ್ನು ಪೊಲೀಸ್ ಠಾಣೆಯಲ್ಲಿ ಮಾಡಿಕೊಂಡಿದ್ದಾರೆ.
ಹೌದು.. ರಾಜಸ್ಥಾನದ ದುಂಗರಪುರ ಪೊಲೀಸ್ ಠಾಣೆಯಲ್ಲಿ ಹಲ್ದಿ ಸಮಾರಂಭ ನಡೆದಿದೆ. ಸದ್ಯ ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ವಾಗಡ್ ದರ್ಶನ್ ಅವರ ಫೇಸ್ಬುಕ್ ಪುಟ ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಮಹಿಳಾ ಕಾನ್ಸ್ಟೆಬಲ್ನ ಹಲ್ದಿ ಕಾರ್ಯಕ್ರಮವನ್ನು ಸಹೋದ್ಯೋಗಿಗಳು ಆಚರಣೆ ಮಾಡುವುದು, ಹಲ್ದಿಯಲ್ಲಿ ಸಾಂಪ್ರದಾಯಿಕ ಹಾಡುಗಳನ್ನು ಹಾಡುವುದನ್ನು ಕಾಣಬಹುದು. ಸಹೋದ್ಯೋಗಿಗಳು ತಮ್ಮ ಸಮವಸ್ತ್ರದಲ್ಲಿ ಮತ್ತು ಮುಖವಾಡಗಳನ್ನು ಧರಿಸಿರುವುದು ಕಂಡುಬರುತ್ತದೆ. ಕಾನ್ಸ್ಟೆಬಲ್ ಸಲ್ವಾರ್ ಸೂಟ್ ಮತ್ತು ಕೆಂಪು ದುಪಟ್ಟಾದಲ್ಲಿ ಕಾಣಿಸಿಕೊಂಡಿದ್ದಾರೆ.


