FACT CHECK | ಪಾಕಿಸ್ತಾನದ ಫೈಟರ್ ಜೆಟ್ ಅನ್ನು ಭಾರತ ಹೊಡೆದುರುಳಿಸಿದೆ ಎಂದು ವಿಡಿಯೋ ಗೇಮ್ ಕ್ಲಿಪ್ ಹಂಚಿಕೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ವಾಯುದಾಳಿಯ ನಂತರ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ ಮೆಷಿನ್ ಗನ್ ಎರಡು ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

ಮೇ 8, 2025 ರಂದು NAMO ಇಂಡಿಯಾ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ, “ಪಾಕಿಸ್ತಾನದ ಫೈಟರ್ JF-17 ವಿಮಾನವನ್ನು ಭಾರತೀಯ ಸೇನೆಯು ಭಾರತದ ಗಡಿಯನ್ನು ಪ್ರವೇಶಿಸಿದ ತಕ್ಷಣ ಹೊಡೆದುರುಳಿಸಿತು. #ಆಪರೇಷನ್ ಸಿಂಧೂರ್ #ಇಂಡಿಯನ್‌ಆರ್ಮಿ #ನರೇಂದ್ರಮೋದಿ ಜೈ ಹಿಂದ್” ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

 

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಏಪ್ರಿಲ್ 22, 2025 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಮೇ 7, 2025 ರಂದು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಬಹು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸುವ ‘ಆಪರೇಷನ್ ಸಿಂದೂರ್’ ಅನ್ನು ಪ್ರಾರಂಭಿಸಿತು. ತರುವಾಯ, ಮೇ 8, 2025 ರ ರಾತ್ರಿ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಅನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿತು.

ವೈರಲ್ ಪೋಸ್ಟ್‌ನಲ್ಲಿ ಪಾಕಿಸ್ತಾನಿ ಫೈಟರ್ ಜೆಟ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಆರೋಪಿಸಲಾಗಿದ್ದರೂ, ವಿಡಿಯೋದಲ್ಲಿ ಎರಡು ಹೆಲಿಕಾಪ್ಟರ್‌ಗಳನ್ನು ಸ್ಪಷ್ಟವಾಗಿ ಕಾಣಬಹುದು, ಇವು JF-17 ಥಂಡರ್ ಫೈಟರ್ ಜೆಟ್‌ಗಿಂತ ಭಿನ್ನವಾಗಿವೆ ಕಾಣುತ್ತಿವೆ. ಇದನ್ನು ಕೆಳಗಿನ ಕೊಲಾಜ್‌ನಲ್ಲಿ ಹೈಲೈಟ್ ಮಾಡಲಾಗಿದೆ.

vishvasnews

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈ ಬಗ್ಗೆ ಯಾವುದೇ ಅಧಿಕೃತ ಮಾಹತಿ ಲಭ್ಯವಾಗಿಲ್ಲ. ವೈರಲ್ ವಿಡಿಯೋದ ದೃಶ್ಯಗಳಲ್ಲಿ ಕಂಡುಬರುವಂತೆ, ಇದೇ ರೀತಿಯ ಅನೇಕ ವೀಡಿಯೊಗಳು ಲಭ್ಯವಾಗಿವೆ. ಇದು ‘ಆರ್ಮಾ 3’ ಎಂಬ ಯುದ್ಧತಂತ್ರದ ಶೂಟರ್ ಸಿಮ್ಯುಲೇಶನ್ ವೀಡಿಯೊ ಗೇಮ್ ಎಂದು ಗುರುತಿಸಲಾಗಿದೆ.

ಡೈನಮೋ ಗೇಮ್ಸ್‌ನ ಸಂಸ್ಥಾಪಕ ಅನೀಶ್ ಜೈನ್ ಸವರು ಈ ವಿಡಿಯೋ ಕುರಿತು ವಿಶ್ವಾಸ್‌ ನ್ಯೂಸ್‌ ಜೊತೆ ಮಾತನಾಡಿದ್ದು, ವೈರಲ್ ವೀಡಿಯೊ ಕ್ಲಿಪ್ ಆರ್ಮಾ 3 ಎಂಬ ವಿಡಿಯೋಗೇಮ್‌ನದ್ದು ಎಂದು ಅವರು ದೃಢಪಡಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನಿ ಫೈಟರ್ ಜೆಟ್ ಅನ್ನು ಭಾರತ ಹೊಡೆದುರುಳಿಸಿದೆ ಎಂದು ಆರ್ಮಾ 3 ಎಂಬ ವಿಡಿಯೋಗೇಮ್‌ ಕ್ಲಿಪ್‌ಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯಾವುದೇ ನೈಜ ಮಿಲಿಟರಿ ಕಾರ್ಯಾಚರಣೆಯ ದೃಶ್ಯವಲ್ಲ, ಸಿಮ್ಯುಲೇಶನ್ ಆಟದ ದೃಶ್ಯವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಭಾರತದಿಂದ ಪಾಕ್‌ ಮೇಲೆ ಸಾವಿರಾರು ಮಿಸೇಲ್ ಮೂಲಕ ದಾಳಿ ನಡೆಸಲಾಗಿದೆ ಎಂದು ಗ್ರಾಫಿಕ್ಸ್‌ ವಿಡಿಯೋ ಹಂಚಿಕೆ


 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights