ಮರಾಠಾ ಕೋಟಾ: ಕೇಂದ್ರದ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್!
ಸಂವಿಧಾನದ 102ನೇ ತಿದ್ದುಪಡಿಯನ್ನು ಉಲ್ಲೇಖಿಸಿ, ಮರಾಠಾ ಕೋಟಾವು ಅಸಂವಿಧಾನಿಕ ಎಂದು ಮೇ 05 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಕೋರ್ಟ್ ವಜಾಗೊಳಿಸಿದೆ.
ಐದು ನ್ಯಾಯಾಧೀಶರ ಸಂವಿಧಾನ ಪೀಠವು, “ಪರಿಶೀಲನಾ ಅರ್ಜಿಯಲ್ಲಿ ನಮೂದಿಸಲಾಗಿರುವ ಆಧಾರಗಳು ಪರಿಶೀಲನಾ ಅರ್ಜಿಯನ್ನು ಪರಿಗಣಿಸಬಹುದಾದ ಸೀಮಿತ ನೆಲೆಯಲ್ಲಿ ಬರುವುದಿಲ್ಲ. ಪರಿಶೀಲನಾ ಅರ್ಜಿಯಲ್ಲಿ ತೆಗೆದುಕೊಂಡ ವಿವಿಧ ಕಾರಣಗಳನ್ನು ಈಗಾಗಲೇ ಮುಖ್ಯ ತೀರ್ಪಿನಲ್ಲಿ ಪರಿಗಣಿಸಲಾಗಿದೆ” ಎಂದು ಹೇಳಿದೆ.
ಮೇ 5 ರ ತೀರ್ಪಿನಲ್ಲಿ, 102 ನೇ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸೇರ್ಪಡೆಗೊಂಡ 342 ಎ ವಿಧಿ ಪ್ರಕಾರ, ಕೇಂದ್ರ ಸರ್ಕಾರ ಮಾತ್ರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು (ಎಸ್‌ಇಬಿಸಿ) ಗುರುತಿಸಬಹುದು ಮತ್ತು ಅವುಗಳನ್ನು ಪ್ರಕಟಿಸಬೇಕಾದ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಇದನ್ನೂ ಓದಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಕರ್ನಾಟಕ ಬಂದ್ : ಕಾವೇರಿದ ಪ್ರತಿಭಟನೆ…!
ಮೀಸಲಾತಿ ಪಟ್ಟಿಯಲ್ಲಿ ಜಾತಿ ಅಥವಾ ಸಮುದಾಯಗಳನ್ನು ಸೇರಿಸಲು, ಹೊರಗಿಡಲು ಅಥವಾ ಮಾರ್ಪಾಡು ಮಾಡಲು ರಾಜ್ಯಗಳು ಆರ್ಟಿಕಲ್ 338 ಬಿ ಅಡಿಯಲ್ಲಿ ಸಲಹೆಗಳನ್ನು ಮಾತ್ರ ನೀಡಬಹುದು. ಆದಾಗ್ಯೂ, ಮೀಸಲಾತಿಗಳನ್ನು ಘೋಷಿಸುವ ರಾಜ್ಯಗಳ ಅಧಿಕಾರವು, ಅವುಗಳ ಪ್ರಮಾಣ, ಪ್ರಯೋಜನಗಳ ಸ್ವರೂಪ ಹಾಗೂ 15 ಮತ್ತು 16 ನೇ ವಿಧಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಷಯಗಳು ಅಸ್ತವ್ಯಸ್ತವಾಗಿರುತ್ತವೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮರಾಠರನ್ನು ಆಕ್ರಮಕಾರರು ಎಂದ ಗೋವಾ ಟೂರಿಸಂ ಇಲಾಖೆ; ವಿರೋಧಕ್ಕೆ ಮಣಿದು ಕ್ಷಮೆಯಾಚಿಸಿದೆ!