ಸಮೀಕ್ಷೆ: ತಮಿಳಲ್ಲಿ ಸ್ಟ್ಯಾಲಿನ್; ಕೇರಳದಲ್ಲಿ ವಿಜಯನ್ಗೆ ಅಧಿಕಾರ; ದಕ್ಷಿಣ ರಾಜ್ಯಗಳಲ್ಲಿ BJPಗೆ ಮುಖಭಂಗ!
ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿದಿವೆ. ನಿನ್ನೆಯಿಂದ ಹಲವಾರು ಚುನಾವಣಾ ಸಮೀಕ್ಷೆಗಳು ಹೊರಬರುತ್ತಿದ್ದು, ಸಮೀಕ್ಷಗಳ ಪ್ರಕಾರ, ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಭಾರೀ ಮುಖಭಂಗ ಎದುರಿಸಲಿದ್ದು, ತಮಿಳುನಾಡಿನಲ್ಲಿ ಸ್ಟಾಲಿನ್, ಕೇರಳದಲ್ಲಿ ಪಿಣರಾಯಿ ವಿಜಯನ್ ಅಧಿಕಾರ ಹಿಡಿಯಲಿದ್ದಾರೆ ಎಂದು ಹೇಳಿವೆ.
ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ 87 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು.
ಎಲ್ಡಿಎಫ್ಗೆ ಕಳೆದ ಬಾರಿಯಷ್ಟು (91) ಕ್ಷೇತ್ರಗಳಲ್ಲಿ ಗೆಲುವು ಅಸಾಧ್ಯವಾದರೂ ಸತತ ಎರಡನೇ ಅವಧಿಗೆ ಅಧಿಕಾರ ಉಳಿಯಲಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಯುಡಿಎಫ್ಗೆ ಹೆಚ್ಚಿನ ಆರು ಕ್ಷೇತ್ರಗಳಲ್ಲಿ ಗೆಲುವುದು ದೊರೆಯಬಹುದು. ಆದರೆ, ಅಧಿಕಾರದ ಹತ್ತಿರಕ್ಕೆ ಬರಲಾಗದು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ 20 ಕ್ಷೇತ್ರಗಳ ಪೈಕಿ 19ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಅದಲ್ಲದೆ, ಕೆಲವು ದಶಕಗಳಿಂದ ಇಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ಪರ್ಯಾಯವಾಗಿ ಅಧಿಕಾರಕ್ಕೆ ಬರುವುದು ಒಂದು ಪದ್ಧತಿಯೇ ಆಗಿಬಿಟ್ಟಿದೆ. ಈ ಎರಡು ಕಾರಣಗಳಿಂದಾಗಿ ಯುಡಿಎಫ್ಗೆ ಇಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಇತ್ತು. ಅದು ಸಾಧ್ಯವಾಗದು ಎಂಬ ಸುಳಿವನ್ನು ಸಮೀಕ್ಷೆಗಳ ಸರಾಸರಿಯು ನೀಡುತ್ತಿದೆ.
ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು ಜಯಭೇರಿ ಬಾರಿಸಲಿದೆ ಎಂಬುದು ಸಮೀಕ್ಷೆಗಳ ಅಂದಾಜು. 234 ಕ್ಷೇತ್ರಗಳ ಪೈಕಿ 171ರಲ್ಲಿ ಈ ಮೈತ್ರಿಕೂಟ ಗೆಲ್ಲಲಿದೆ. ಈಗ ಅಧಿಕಾರದಲ್ಲಿ ಇರುವ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು 59 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿ ಕೂಡ ಇದೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ್ದ ನಟ ಕಮಲ್ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಪಕ್ಷವು ಚುನಾವಣೆಯಲ್ಲಿ ಯಾವುದೇ ಪರಿಣಾಮ ಉಂಟು ಮಾಡುವಲ್ಲಿ ವಿಫಲವಾಗಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.
ಸಮೀಕ್ಷೆಗಳಲ್ಲಿ ಅವರ ಪಕ್ಷದ ಪ್ರಸ್ತಾಪವೇ ಇಲ್ಲ. ‘ಇತರರು’ ಒಂದು ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಹೇಳಲಾಗಿದೆ. ಕಮಲ್ ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ, ವಿ.ಕೆ. ಶಶಿಕಲಾ ಅವರ ಸೋದರಳಿಯ ಟಿ.ಟಿ.ವಿ. ದಿನಕರನ್ ನೇತೃತ್ವದ ಪಕ್ಷವು ನಾಲ್ಕು ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

