ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಕ್ಸಿಜನ್ ಕೊರತೆ : ಬೆಂಗಳೂರು, ಹುಬ್ಬಳ್ಳಿ, ಕೊಡಗು ಸೇರಿ 23 ಜನ ಸಾವು!

ರಾಜ್ಯದೆಲ್ಲೆಡೆ ಆಕ್ಸಿಜನ್ ಕೊರತೆಯಿಂದಾಗಿ ಜನ ಸಾಯುತ್ತಿರುವುದು ಬೆಳಕಿಗೆ ಬಂದಿದೆ.  ಚಾಮರಾಜನಗರ ಹಾಗೂ ಕಲಬುರಗಿ ಸಂಭವಿಸಿದ ಕೋವಿಡ್ ದುರಂತದ ಬಳಿಕ ಇಂತಹದ್ದೇ ದುರಂತಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಭವಿಸಿದೆ.

ಹೌದು…  ಬೆಂಗಳೂರಿನ ನಗರದ ಯಲಹಂಕ ನ್ಯೂಟೌನ್ ಆಸ್ಪತ್ರೆಯಲ್ಲಿ 45 ವರ್ಷದ ಮಹಿಳೆ ಹಾಗೂ 58 ವರ್ಷದ ಕೋವಿಡ್ ರೋಗಿಗಳು ಆಕ್ಜಿಜನ್ ಕೊರತೆಯಿಂದಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ.

ಸೋಮವಾರ ಸಂಜೆ ಈ ಇಬ್ಬರು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರು ರೋಗಿಗಳು ಆಸ್ಪತ್ರೆ ತಲುಪುವ ವೇಳೆಗೆ ಅವರ ಸ್ಥಿತಿ ಗಂಭೀರವಾಗಿತ್ತು, ಆಸ್ಪತ್ರೆಗೆ ಸೋಮವಾರ ಆಕ್ಸಿಜನ್ ಬರಬೇಕಿತ್ತು, ಆದರೆ ಬರಲಿಲ್ಲ ಎಂದು ಯಲಹಂಕ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ.ಭಾಗ್ಯಲಕ್ಷ್ಮಿ ಹೇಳಿದ್ದಾರೆ.

ಹುಬ್ಬಳ್ಳಿ :- 

ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಐವರು ಕೊರೋನಾ ಸೋಂಕಿತರು ಏಕಕಾಲಕ್ಕೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಹುಬ್ಬಳ್ಳಿಯ ಲೈಫ್’ಲೈನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೇರಿದಂತೆ ಐವರು ಸೋಂಕಿತರು ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಈ ನಡುವೆ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ಮೃತಪಟ್ಟವರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಜಿಲ್ಲಾ ಆಡಳಿತ ಮಂಡಳಿಯ ಅಧಿಕಾರಿಗಳು ನಿರಾಕರಿಸಿದ್ದಾರೆ.

 ಕೊಡಗು :-

ಕೊಡಗು ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ. 16 ಸೋಂಕಿತರು ಮೃತಟ್ಟಿರುವುದನ್ನು ಸ್ವತಃ ಜಿಲ್ಲಾಡಳಿತವೇ ಸ್ಪಷ್ಟಪಡಿಸುತ್ತಿದೆ. ಆದರೂ 16 ಸೋಂಕಿತರು ಮೃತಪಟ್ಟಿದ್ದಾದರೂ ಯಾಕೆ ಎನ್ನೋದನ್ನು ಮಾತ್ರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಡೀನ್ ಆಗಲಿ, ಸರ್ಜನ್ ಆಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ಪಷ್ಟಪಡಿಸುತ್ತಿಲ್ಲ. ಆದರೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮೃತ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ನಾಲ್ವರು ವೈದ್ಯರನ್ನು ಕರೆದು ತುರ್ತು ಸಭೆ ನಡೆಸಿದ್ದಾರೆ.

ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕರೆದು ತುರ್ತು ಸಭೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು, ಮೃತರೆಲ್ಲರೂ ತಡವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಕಳೆದ 24 ಗಂಟೆಯಲ್ಲಿ 16 ಸೋಂಕಿತರು ಮೃತಪಟ್ಟಿದ್ದಾರೆ. ಇದರಲ್ಲಿ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಯಾವುದೇ ವೈಫಲ್ಯವಾಗಿಲ್ಲ ಎನ್ನುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.