ಹರಿಯಾಣ ಸಿಎಂ ಖಟ್ಟರ್‌ ವಿರುದ್ಧ ಪ್ರತಿಭಟನೆ: ರೈತರ ಮೇಲೆ ಲಾಠಿ ಚಾರ್ಜ್‌!

ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದ ರೈತರು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಹಿಸ್ಸಾರ್‌ ಜಿಲ್ಲೆಗೆ ಭೇಟಿ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ರೈತರ ಮೇಲೆ ಪೊಲೀಸರು ಲಾಠಿಚಾರ್ಚ್‌ ಮಾಡಿದ್ದಾರೆ.

ಭಾನುವಾರ ಬೆಳಗ್ಗೆ ರೈತರು ನಡೆಸಿದ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದು, ಇದರಲ್ಲಿ ಅನೇಕ ರೈತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹಿಸ್ಸಾರ್‌ನಲ್ಲಿ 500 ಬೆಡ್‌ಗಳ ಕೋವಿಡ್‌ ಸೆಂಟರ್‌ ಅನ್ನು ಉದ್ಘಾಟಿಸಲು ಖಟ್ಟರ್‌ ಅವರು ಜಿಲ್ಲೆಗೆ ಇಂದು ಆಗಮಿಸಿದ್ದರು. ಇವರ ಆಗಮನದ ನಂತರ ರೈತರು ಸಿಎಂ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ರೈತರನ್ನು ತಡೆಯುವ ಸಲುವಾಗಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಕೂಡ ಹಾಕಿದ್ದರು ಎನ್ನಲಾಗಿದೆ.

ಸಿಎಂ ವಿರುದ್ಧ ಪ್ರತಿಭಟಿಸಲು ನೂರಾರು ರೈತರು ಜಮಾಯಿಸಿದ್ದರು. ರೈತರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ ಕೂಡ ಹಾಕಿದ್ದರು. ಆದರೆ, ಕೋಪಗೊಂಡ ರೈತರು ಬ್ಯಾರಿಕೇಡ್‌ಗಳನ್ನು ಮುರಿದು ಮುಂದೆ ಹೋಗಲು ಪ್ರಾರಂಭಿಸಿದರು. ರೈತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಿದರು. ಅಶ್ರುವಾಯು ಸಿಡಿಸಿದರು. ಈ ಲಾಠಿಚಾರ್ಜ್‌ನಲ್ಲಿ ರೈತರಿಗೆ ಗಾಯಗಳಾಗಿವೆ ಎಂದು ಆಜ್‌ತಕ್‌ ವರದಿ ಮಾಡಿದೆ..

ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ರೈತ ಹೋರಾಟವನ್ನು ವಿರೋಧಿಸುತ್ತಲೇ ಬಂದಿರುವ ಖಟ್ಟರ್‌ ಅವರನ್ನು ಈವರೆಗೂ ಜಿಲ್ಲೆಗೆ ಬರಲು ರೈತರು ಅವಕಾಶ ನೀಡಿರಲಿಲ್ಲ. ಖಟ್ಟರ್‌ ಬರುವ ಸ್ಥಳಗಳಲ್ಲೆಲ್ಲಾ ರೈತರು ಪ್ರತಿಭಟನೆ ನಡೆಸಿ ರೈತರ ಪರವಾಗಿ ನಿಲ್ಲಬೇಕು ಹಾಗೂ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ಜಾರಿಗೆ ತಂದಿತು. ಈ ಮೂರು ಕಾನೂನುಗಳ ವಿರುದ್ಧ, ರೈತರು ಕಳೆದ ವರ್ಷ ನವೆಂಬರ್ 26 ರಿಂದ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ 11 ಬಾರಿ ಮಾತುಕತೆ ನಡೆದರೂ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದಿಲ್ಲ. ರೈತ ವಿರೋಧಿ ಮೂರು ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಕಾನೂನನ್ನು ತರಬೇಕು ಎಂಬುದು ರೈತರ ಆಗ್ರಹವಾಗಿದೆ.

Read Also: ರೈತ ಹೋರಾಟಕ್ಕೆ ಆರು ತಿಂಗಳು: ಮೇ 26ರಂದು ದೇಶಾದ್ಯಂತ ಕಪ್ಪು ದಿನ ಆಚರಣೆಗೆ ರೈತರ ಕರೆ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights