ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ; ಕೈ ಕಟ್ಟಿ ಬಾವಿಗೆ ಎಸೆದು ಕೊಲೆಗೈದ ದುರುಳರು!

ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಅವರ ಕೈಗಳನ್ನು ಕಟ್ಟಿ ಬಾವಿಗೆ ಎಸೆದು ಕೊಲೆ ಮಾಡಿರುವ ಅಮಾನವೀಯ ಘಟನೆ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ನಡೆದಿದೆ.

ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದ 14 ಮತ್ತು 15 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರು ಕಳೆದ ನಾಲ್ಕು ದಿನಗಳ ಹಿಂದೆ  ಕಾಣೆಯಾಗಿದ್ದರು. ಕಾಣೆಯಾದ ಎರಡು ದಿನಗಳ ನಂತರ ಇಬ್ಬರ ಮೃತ ದೇಹಗಳು ಕೈ ಕಟ್ಟಿದ ಸ್ಥಿತಿಯಲ್ಲಿ ಬಾವಿಯೊಂದರಲ್ಲಿ ಪತ್ತೆಯಾಗಿವೆ.

ಅದೇ ಊರಿನ ಯುವಕ ಹಬ್ಬು ಮೈಹಿಬೂಬಸಾಬ ಗುಳಬಾಳ ಎಂಬುವವನು ಕಳೆದ 6 ತಿಂಗಳಿನಿಂದ ಬಾಲಕಿಯ ಹಿಂದೆ ಬಿದ್ದು ಪ್ರೀತಿಸುವಂತೆ ಹಿಂಸಿಸುತ್ತಿದ್ದ. ಆತನೆ ತನ್ನ ತಂಗಿ ಮತ್ತು ಆಕೆಯ ಸ್ನೇಹಿತೆಯನ್ನು ಕರೆದುದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸಹೋದರ ದೂರು ನೀಡಿದ್ದಾರೆ. ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜಾಪುರ: ಬಸವನಬಾಗೇವಾಡಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಯರ ಅತ್ಯಾಚಾರ ಮಾಡಿ, ಕೈ ಕಟ್ಟಿ ಬಾವಿಗೆ ಎಸೆದು ಕೊಲೆ

ಬಸವನಬಾಗೇವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಈ ಗ್ರಾಮದ ಬಾಲಕಿಯರು ಮೇ 12 ರ ಮಧ್ಯಾಹ್ನ ಕಾಣೆಯಾಗಿದ್ದರು. ಸ್ನೇಹಿತೆಯ ಮನೆಯಲ್ಲಿ ಇರಬಹುದು ಎಂದು ಎರಡು ಕುಟುಂಬದವರು ಸುಮ್ಮನಿದ್ದರು. ಆದರೆ ಶುಕ್ರವಾರ ಬಾವಿಯೊಂದರಲ್ಲಿ ಇಬ್ಬರ ಕೈಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

“ಘಟನೆ ಕುರಿತು ಫೋಕ್ಸೋ ಕಾಯ್ದೆ ಅಡಿಯಲ್ಲಿ 8 ಜನರ ಮೇಲೆ ಪ್ರಕರಣ ದಾಖಲಾಗಿದೆ. ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತರ ಕುಟುಂಬಕ್ಕೆ ಜಾಂಭವ ಯುವ ಸೇನಾ ವತಿಯಿಂದ ಪರಿಹಾರ ಮತ್ತು ಸಾಂತ್ವನ ನೀಡಲಾಗಿದೆ. ಕೇಸಿನ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದೇವೆ. ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ಬಳಿಯೂ ಮಾತುಕತೆ ನಡೆದಿದೆ. ಸಂಘಟನೆ ಕಡೆಯಿಂದ ಎಲ್ಲಾ ರೀತಿಯ ಸಹಾಯ ಮಾಡಲಾಗುತ್ತಿದೆ. ಇಬ್ಬರು ಮಕ್ಕಳಿಗೆ ನ್ಯಾಯ ದೊರಕುವವರೆಗೆ ನಾವು ಬಿಡುವುದಿಲ್ಲ” ಎಂದು ಜಾಂಭವ ಯುವಸೇನೆ ಸಂಸ್ಥಾಪಕ ರಮೇಶ್ ಚಕ್ರವರ್ತಿ ಹೇಳಿದ್ದಾರೆ.

ಇನ್ನೂ ಬಾಲಕಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ತನಿಖೆ ನಡೆಸಿ, 5 ದಿನಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗದ ಸದಸ್ಯ ಎಚ್.ವೆಂಕಟೇಶ ದೊಡ್ಡೇರಿ ವಿಜಯಪುರ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

“ಮಾದಿಗ ಸಮುದಾಯದ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಕೈಗಳನ್ನು ಕಟ್ಟಿ 20-25 ಅಡಿ ಆಳದ ಬಾವಿಗೆ ಎಸೆದಿದ್ದಾರೆ. ಆದರೆ, ಹೆಣ್ಣು ಮಕ್ಕಳಿಗೆ ನ್ಯಾಯ ನೀಡುವ ಬದಲು ಇಬ್ಬರ ಕುಟುಂಬಕ್ಕೆ ಗ್ರಾಮದಲ್ಲಿ ಪಂಚಾಯಿತಿ ನಡೆಸಿ, ಬೆದರಿಕೆ ಹಾಕಿದ್ದಾರೆ. ಇವರ ಸಾವಿಗೆ ನ್ಯಾಯ ದೊರಕಬೇಕು. ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು. ತನಿಖೆ ಸರಿಯಾಗಿ ನಡೆಯದಿದ್ದರೇ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಜಾಂಭವ ಯುವಸೇನೆ ವಿಜಯಪುರ ಜಿಲ್ಲಾಧ್ಯಕ್ಷ ಮಕ್ಕಪ್ಪ ಬಾಗೇವಾಡಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ ನಿಯಮಗಳ ಉಲ್ಲಂಘನೆ ಆರೋಪ: ಮೂವರು ಬಿಜೆಪಿ ಶಾಸಕರ ಬಂಧನ – ಬಿಡುಗಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights