ಕಡಿಮೆಯಾಗಿದ್ದು ಕೊರೊನಾ ಪ್ರಕರಣಗಳಲ್ಲ; ಕೊರೊನಾ ಪರೀಕ್ಷೆಗಳು!
ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಯಾದ ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಕಾರಣ ಬಿಬಿಎಂಪಿ ಕೊರೊನಾ ಟೆಸ್ಟ್‌ಗಳನ್ನೇ ಕಡಿಮೆ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಲಾಕ್‌ಡೌನ್ ಜಾರಿಯಾದ ನಂತರವೂ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಬಿಬಿಎಂಪಿ ಮುಜುಗರದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೊರೊನಾ ಟೆಸ್ಟ್‌ಗಳ ಸಂಖ್ಯೆಯನ್ನು ಮಿತಿಗೊಳಿಸಿದೆ ಎಂದು ಹೇಳಲಾಗಿದೆ. ಅಲ್ಲದೆ, ಕೊರೊನಾ ಪರೀಕ್ಷೆಗಳನ್ನು ಮಾಡಲು ಕೊರೊನಾ ಟೆಸ್ಟ್ ಕಿಟ್‌ಗಳೇ ಇಲ್ಲ ಎಂದು ವೈದ್ಯರು ಹೇಳುತ್ತಿರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಈ ಹಿಂದೆ ಒಂದು ಲಕ್ಷ ಮಂದಿಗೆ ಪರೀಕ್ಷೆ ಮಾಡುತ್ತಿದ್ದಾಗ 20 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನಲೆಯಲ್ಲಿ ಕೊರೊನಾ ಟೆಸ್ಟ್‌ಗಳನ್ನು ಕಡಿಮೆ ಮಾಡಿ, ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಈ ನಡುವೆ ಇಂದು ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದದಲ್ಲಿ ಬೆಂಗಳೂರು ಬಿಬಿಎಂಪಿ ಆಯಕ್ತ ಗೌರವ್ ಗುಪ್ತ ಅವರು ಮೋದಿಯವರಿಗೆ ಬೆಂಗಳೂರಿನಲ್ಲಿ ಲಾಕ್‌ಡೌನ್‌ನಿಂದಾಗಿ ಸೊಂಕು ಕಡಿಮೆಯಾಗುತ್ತಿದೆ, ಕಟ್ಟು ನಿಟ್ಟಿನ ಕ್ರಮದಿಂದಾಗಿ ಬೆಂಗಳೂರಿನಲ್ಲಿ 10 ಸಾವಿರ ಕಮ್ಮಿಯಾಗಿದೆ ಅಂತ ಹೇಳಿದ್ದಾರೆ. ಆದರೆ ನಂಬರ್ಲಹ ಸುದ್ದಿಗಳ ಪ್ರಕಾರ ಜಾಗತೀಕ ಮಟ್ಟದಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಟೆಸ್ಟ್ ಅನ್ನು ನಡೆಸುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಯಾರನ್ನು ಮೆಚ್ಚಿಸಲು ಬಿಬಿಎಂಪಿ ಸುಳ್ಳು ಹೇಳುತ್ತಿದೆ ಎನ್ನುವುದು ತಿಳಿಯುತ್ತಿಲ್ಲ ಅಂತ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಒಂದು ವೇಳೆ ಕರೋನ ಸೊಂಕು ಮತ್ತೆ ಹೆಚ್ಚಳವಾದ್ರೇ ಅದರ ಹೊಣೆಯನ್ನು ಯಾರು ಹೊರುತ್ತಾರೆ ಎನ್ನುವುದು ಈಗ ಪ್ರಶ್ನೆಯಾಗಿದೆ.
ಹಳ್ಳಿಗಳಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಾರಣ ಹಳ್ಳಿಗಳ ಪ್ರಾಥಮಿಕ ಆಸ್ಪತ್ರೆಗಳಲ್ಲಿಯೂ ಕೊರೊನಾ ಪರೀಕ್ಷೆಗಳನ್ನು ಕಡಿಮೆಗೊಳಿಸಲಾಗಿದೆ. ಶ್ರವಣ ಬೆಳಗೊಳ ಪ್ರಾಥಮಿಕ ಆಸ್ಪತ್ರೆಯಲ್ಲಿ ದಿನಕ್ಕೆ ಕೇವಲ 40 ಜನರಿಗೆ ಮಾತ್ರ ಕೊರೊನಾ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಇದೇ ಕಾರಣ ಎಂದು ಹೇಳಲಾಗಿದೆ.
ಇದನ್ನೂ ಓದಿ: ಲಾಕ್‌ಡೌನ್ ವಿಸ್ತರಿಸುವುದಾದರೆ ಅದು ‘ಜನಹಿತದ ಲಾಕ್‌ಡೌನ್’ ಆಗಿರಲಿ: ಹೆಚ್‌ಡಿ ಕುಮಾರಸ್ವಾಮಿ

