ಲಾಕ್‌ಡೌನ್‌ ವಿಸ್ತರಿಸುವುದಾದರೆ ಅದು ‘ಜನಹಿತದ ಲಾಕ್‌ಡೌನ್‌’ ಆಗಿರಲಿ: ಹೆಚ್‌ಡಿ ಕುಮಾರಸ್ವಾಮಿ

ಸರ್ಕಾರ ಲಾಕ್‌ಡೌನ್‌ ವಿಸ್ತರಿಸುವ ಚಿಂತನೆಯಲ್ಲಿದೆ ಎಂದು ವರದಿಯಾಗುತ್ತಿದೆ. ಲಾಕ್‌ಡೌನ್‌ ವಿಸ್ತರಿಸುವುದೇ ಆದರೆ, ಅದು ‘ಜನಹಿತದ ಲಾಕ್‌ಡೌನ್‌’ ಆಗಿರಲಿ. ಆರ್ಥಿಕ,ಆಹಾರ ಪ್ಯಾಕೇಜ್‌, ಪರಿಹಾರ ಕ್ರಮಗಳು ಉದ್ದೇಶಿತ ವಿಸ್ತರಿತ ಲಾಕ್‌ಡೌನ್‌ನಲ್ಲಿರಲಿ. ಸರ್ವಪಕ್ಷಗಳ ಸಭೆಯಲ್ಲಿ ನಾವು ಸೂಚಿಸಿದ್ದೂ ‘ಜನಹಿತದ ಲಾಕ್‌ಡೌನ್‌’ ಕಲ್ಪನೆಯೇ ಆಗಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜನರಿಗೆ ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‌ಡೌನ್‌ನ ಉಸಾಬರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಕೈತೊಳೆದುಕೊಂಡಿದೆ. ಕೇಂದ್ರ ಸರ್ಕಾರ ಜನರ ಕೈಬಿಟ್ಟಂತೆ ರಾಜ್ಯ ಸರ್ಕಾರ ಜನರನ್ನು ನಿರ್ಲಕ್ಷಿಸಬಾರದು. ಅವರ ಅಗತ್ಯಗಳನ್ನು ಪೂರೈಸುವುದರತ್ತ ರಾಜ್ಯ ಗಮನಹರಿಸಬೇಕು. ಲಾಕ್‌ಡೌನ್‌ನಲ್ಲಿ ಪರಿಹಾರ ಕ್ರಮಗಳು ಇರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನೆರೆಯ ರಾಜ್ಯಗಳಲ್ಲಿ ಲಾಕ್‌ಡೌನ್‌ ಹೇಗಿದೆ, ಜನರಿಗೆ ಹೇಗೆ ನೆರವು ಸಿಗುತ್ತಿದೆ ಎಂಬುದನ್ನು ರಾಜ್ಯ ಸರ್ಕಾರ ಒಂದು ಬಾರಿ ಅವಲೋಕಿಸಬೇಕು. ಜನರನ್ನು ಮನೆಗಳಿಂದ ಹೊರ ಬಾರದಂತೆ ತಡೆಯುವುದಷ್ಟೇ ಈ ಲಾಕ್‌ಡೌನ್‌ನ ಉದ್ದೇಶವಾಗಬಾರದು. ಜನರ ಸಹಭಾಗಿತ್ವದೊಂದಿಗೆ ವೈರಾಣುವನ್ನು ನಿಗ್ರಹಿಸುವುದು ಉದ್ದೇಶವಾಗಬೇಕು. ಅದಕ್ಕಾಗಿ ಜನರಿಗೆ ಪರಿಹಾರ ಅಗತ್ಯ ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ಜನರ ಜೀವ ಉಳಿಸುವ ಕ್ರಮ ಹೌದು. ಆದರೆ, ಈ ಲಾಕ್‌ಡೌನ್‌ ಜನರ ಬದುಕನ್ನು ಹೈರಾಣಾಗಿಸುತ್ತಿದೆ ಎಂಬುದೂ ನಮಗೆಲ್ಲರಿಗೂ ಅರಿವಿಗೆ ಬಂದಿರುವ ವಿಚಾರ. ಹೀಗಾಗಿಯೇ ನಾವು ಸೂಚಿಸುತ್ತಿರುವ ಜನಹಿತದ ಲಾಕ್‌ಡೌನ್‌ ಮಾಡುವುದರತ್ತ ಸರ್ಕಾರ ಆದ್ಯತೆ ನೀಡಬೇಕು. ಜನರ ಜೀವ ಉಳಿಸುತ್ತಲೇ, ಜೀವನಕ್ಕೂ ನೆರವಾಗುವುದು ಜನಪರ ಸರ್ಕಾರವೊಂದರ ಕರ್ತವ್ಯ ಎಂದು ತಿಳಿಸಿದ್ದಾರೆ.

ಇದನ್ನೂ  ಓದಿ: ರಾಜ್ಯದಲ್ಲಿ ಕೊರೊನಾ 3ನೇ ಅಲೆ ಭೀತಿ: ಲಾಕ್‌ಡೌನ್‌ ವಿಸ್ತರಣ? ಯಡಿಯೂರಪ್ಪ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights