ಕೊರೊನಾ ತಡೆಗೆ ಗಲ್ಲಿ ಗಲ್ಲಿಯಲ್ಲಿ ಹೋಮ ಮಾಡಿಸಿದ ಬಿಜೆಪಿ ಶಾಸಕ!
ಕಠಿಣ ಕೊರೊನಾ ನಿರ್ಬಂಧಗಳ ನಡುವೆ ಜನಪ್ರತಿನಿಧಿಯೇ ಮೌಢ್ಯಕ್ಕಿಳಿದು ಹೋಮ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೋಮ ಮಾಡಿದರೆ ಕೊರೊನಾ ಹೋಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಬೆಳಗಾವಿಯ ಶಿವಾಜಿ ಗಾರ್ಡನ್ ನ 50 ಕಡೆ ಹೋಮ ಮಾಡಿಸಿದ್ದಾರೆ. ಹೋಮ ಮಾಡುವುದರಿಂದ ವಾತಾವರಣ ಶುದ್ಧಿಯಾಗುತ್ತದೆ. ವಾತಾವರಣ ಶುದ್ಧಿಯಾದರೆ ಕೊರೊನಾ ಹರಡುವುದಿಲ್ಲ ಎಂದು ಶಾಸಕರು ಹೇಳಿದ್ದು ಈ ಬಗ್ಗೆ ತಾವು 6 ಜನ ಆಯುರ್ವೇದಿಕ ವೈದ್ಯರ ಸಲಹೆ ಪಡೆದುಕೊಂಡಿದ್ದೇನೆ ಎಂದಿದ್ದಾರೆ.
ಬೆಳಗಾವಿಯ 50 ಸ್ಥಳಗಳಲ್ಲಿ ಅಗ್ನಿಕುಂಡದಲ್ಲಿ ಬೆರಣಿ, ಅಕ್ಕಿ, ಬೇವಿನ ಸೊಪ್ಪು , ದೂಪ, ಲವಂಗ, ಬೆರಣ, ಕರ್ಪೂರ, ತುಪ್ಪ, ಕವಡಿ,ಅಕ್ಕಿ ನೈಸರ್ಗಿಕ ಪದಾರ್ಥಗಳನ್ನು ಹಾಕಿ ಹೋಮ ಮಾಡಲಾಗಿದೆ. ಶಾಸಕರಿಂದಲೇ ಅಗ್ನಿಕೊಂಡದ ವ್ಯವಸ್ಥೆ ಮಾಡಲಾಗಿದ್ದು ಸ್ವತ: ಶಾಸಕರೇ ಈ ಹೋಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಮನೆ ಮನೆಗೆ ಈ ಅಗ್ನಿಕೊಂಡ ತೆರಳಿದೆ. ಸ್ಥಳೀಯರು ತಮ್ಮ ಮನೆಗಳಿಂದಲೇ ಅಗ್ನಿ ಕೊಂಡದಲ್ಲಿ ಬೇವು, ಲವಂಗ, ಅಕ್ಕಿ, ತುಪ್ಪಾ ಹೀಗೆ ಕೆಲ ವಸ್ತುಗಳನ್ನು ಹಾಕಿ ಹೋಮಕ್ಕೆ ಸಹಕರಿಸಿದ್ದಾರೆ.
ಈ ನೈಸರ್ಗಿಕ ವಸ್ತುಗಳಿಂದ ಬರುವ ಹೊಗೆಯಿಂದ ವಾತಾವರಣ ಶುದ್ಧಿಯಾಗುತ್ತದೆ. ವಾತಾವರಣ ಶುದ್ಧಿಯಾದರೆ ಕೊರೊನಾ ಹೋಗುತ್ತದೆ ಎಂದು ಶಾಸಕ ಹೋಮ ಮಾಡಿಸಿದ್ದಾರೆ. ಇದರಿಂದಾಗಿ ಶಾಕರಿಂದಲೇ ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ಅಭಯ್ ಪಾಟೀಲ್ “ ನಾವು ಆಸ್ಪತ್ರೆ ಸಮೀಪ ಮಾಡಿಲ್ಲ. ನಿಮಗೆ ಹೊಗೆ ಆಗಿರಬಹುದು. ಆದರೆ ನಮಗೆ ಅದು ಹೊಗೆ ಅಲ್ಲ. ನೈಸರ್ಗಿಕ ಹೋಮ. ಇದು ವೈಜ್ಞಾನಿಕ ವಾಗಿ ಸಾಬೀತಾಗಿದೆ. ಇದು ಪರಿಸರವನ್ನು ಸ್ವಚ್ಚಗೊಳಿಸುತ್ತದೆ. ಪರಿಸರ ಸ್ವಚ್ಚವಾದರೆ ಕೊರೊನಾ ಹೋಗುತ್ತದೆ. ಹೀಗಾಗಿ ನಾವು ಎಲ್ಲ ಜನರ ಸಹಭಾಗಿತ್ವದಲ್ಲಿ ಮಾಡಿದ್ದೇವೆ. 50 ಸ್ಥಳಗಳಲ್ಲಿ 300 ಮನೆಗಳ ಮುಂದೆ ಹೋಮ ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಆದರೆ “ಈ ರೀತಿ ಹೋಮ ಮಾಡುವುದರಿಂದ ಕೊರೊನಾ ಹೋಗುತ್ತದೆ ಎನ್ನುವುದು ಮೂಢನಂಬಿಕೆ. ಕೊರೊನಾ ಒಂದು ವೈರಸ್. ಇದು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ. ಇದು ಹರಡದಿರಲು ಸಾಮಾಜಿಕ ಅಂತರ ಕಾಪಾಡುವುದು ಉತ್ತಮ. ಹೋಮ ಮಾಡಲು ಜನ ಸೇರುವುದು ಅಥವಾ ಹೋಮ ಮಾಡುವುದರಿಂದ ಕೊರೊನಾ ವೈಸರ್ ಹರಡುವುದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ವೈದ್ಯರು ಹೇಳುತ್ತಾರೆ.

