ವಂಚನೆ ಆರೋಪಿ ವಜ್ರ ವ್ಯಾಪಾರಿ ಚೋಕ್ಸಿ; ಭಾರತಕ್ಕೆ ನೇರ ಹಸ್ತಾಂತರ ಸಾಧ್ಯವಿಲ್ಲ: ಡೊಮಿನಿಕಾ ಪ್ರಧಾನಿ

ಭಾರತದಿಂದ ಪರಾರಿಯಾಗಿದ್ದ ವಂಚನೆ ಆರೋಪಿ, ವಜ್ರ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಡೊಮಿನಿಕಾ ಪ್ರಧಾನಿ ರೂಸ್‌ವೆಲ್ಟ್‌ ಸ್ಕೆರಿಟ್‌ ಹೇಳಿದ್ದಾರೆ.

ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಹೊಂದಿರುವ ಚೋಕ್ಸಿ ಅವರನ್ನು ಭಾರತಕ್ಕೆ ನೇರವಾಗಿ ಹಸ್ತಾಂತರಿಸುವಂತೆ ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ಹೇಳಿದ್ದಾರೆ. ಆದರೂ, ಹಾಗೆ ಮಾಡಲು ಸಾಧ್ಯವಿಲ್ಲ. ಅವರನ್ನು ಆಂಟಿಗುವಾ ಮತ್ತು ಬಾರ್ಬುಡಾ ದ್ವೀಪಕ್ಕೇ ಕಳುಹಿಸಲಾಗುವುದು ಎಂದು ರೂಸ್‌ವೆಲ್ಟ್‌ ಸ್ಕೆರಿಟ್‌ ಹೇಳಿದ್ದಾರೆ.

ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರು 2018ರಲ್ಲಿ ಬ್ಯಾಂಕ್ ವಂಚನೆ ಪ್ರಕರಣ ಬಯಲಿಗೆ ಬರುವ ಮುನ್ನವೇ ದೇಶ ತೊರೆದಿದ್ದರು. 2019ರಲ್ಲಿ ನೀರವ್ ಮೋದಿಯನ್ನು ಲಂಡನ್‌ನಲ್ಲಿ ಬಂಧಿಸಲಾಗಿತ್ತು. ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಚೋಕ್ಸಿ ವಾಸಿಸುತ್ತಿದ್ದರು. ಅಲ್ಲಿಂದಲೂ ಪರಾರಿಯಾಗಿದ್ದ ಚೋಕ್ಸಿ ಡೊಮಿನಿಕಾಕ್ಕೆ ಹೋಗಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿದೆ.

ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ಅವರು ಡೊಮಿನಿಕಾದ ಪ್ರಧಾನಿ ರೂಸ್‌ವೆಲ್ಟ್‌ ಸ್ಕೆರಿಟ್‌ ಜೊತೆ ಮಾತುಕತೆ ನಡೆಸಿದ್ದಾರೆ.

ಚೋಕ್ಸಿ ದೋಣಿ ಮೂಲಕ ಅಕ್ರಮವಾಗಿ ಡೊಮಿನಿಕಾಗೆ ಪ್ರವೇಶಿಸಿರಬಹುದು. ನಾವು ನಮ್ಮ ದೇಶಕ್ಕೆ ಅವರನ್ನು ಕರೆಸಿಕೊಳ್ಳಲು ಬಯಸುವುದಿಲ್ಲ. ಆತನನ್ನು ನೇರವಾಗಿ ಭಾರತಕ್ಕೆ ಕಳುಹಿಸಿ. ಬಂಧನದಿಂದ ತಪ್ಪಿಸಿಕೊಳ್ಳುವ ಮೂಲಕ ಚೋಕ್ಸಿ ತಪ್ಪೆಸಗಿದ್ದಾರೆ ಎಂದು ಬ್ರೌನ್‌ ಹೇಳಿದ್ದಾರೆ.

13,500 ಕೋಟಿ ರೂ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಚೋಕ್ಸಿ ಭಾರತದಿಂದ ಆಂಟಿಗುವಾ ಮತ್ತು ಬಾರ್ಬುಡಾಕ್ಕೆ ಪರಾರಿಯಾಗಿದ್ದರು. ಭಾನುವಾರ ಅಲ್ಲಿಂದ ಆಂಟಿಗುವಾದಿಂದಲೂ ಪರಾರಿಯಾಗಿದ್ದರು. ಡೊಮಿನಿಕಾದಲ್ಲಿ ಅವರನ್ನು ಬಂಧಿಸಲಾಗಿದೆ.

ಚೋಕ್ಸಿ 2017ರ ಜನವರಿ ಮೊದಲ ವಾರದಲ್ಲಿ ಭಾರತದಿಂದ ಪಲಾಯನ ಮಾಡುವ ಮೊದಲು, ‘ಹೂಡಿಕೆ ಮಾಡುವ ಮೂಲಕ ಪೌರತ್ವ ಪಡೆಯುವ ಯೋಜನೆ’ಯಡಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿದ್ದರು. ನಂತರ ಹಗರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ವಿಲಕ್ಷಣ ಘಟನೆ: ಹೈಸ್ಪೀಡ್‌ ರೈಲಿನ ವೇಗಕ್ಕೆ ಕುಸಿದು ಬಿತ್ತು ರೈಲ್ವೇ ನಿಲ್ದಾಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights