ಅಧಿಕಾರ – ಕಾದುನೋಡುವ ತಂತ್ರ: ಬಿಜೆಪಿಯಲ್ಲಿ ಆಂತರಿಕ ಸಮರ; ಮೌನತಾಳಿದ ಕಾಂಗ್ರೆಸ್!
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಅವರನ್ನು ಸಿಎಂ ಖುರ್ಚಿಯಿಂದ ಕೆಳಗಿಳಿಸಿ, ಬೇರಬ್ಬರನ್ನು ಆ ಸ್ಥಾನಕ್ಕೆ ಕೂರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಳಿಬರುತ್ತಿದೆ. ಈ ನಡುವೆ ಶಾಸಕ ರೇಣುಕಾಚಾರ್ಯ ಸಿಎಂ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಯೋಗೇಶ್ವರ್ ಸೇರಿದಂತೆ ಹಲವು ನಾಯಕರ ವಿರುದ್ಧ ಗುಡುಗುತ್ತಿದ್ದಾರೆ. ಯೋಗೇಶ್ವರ್ ಸೇರಿದಂತೆ ಹಲವರು ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹವಣಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ, ಈ ವಿಚಾರವಾಗಿ ಕಾಂಗ್ರೆಸ್ ಮೌನತಾಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಂದು ಪತ್ರಿಕಾಗೋಷ್ಟಿ ನಡೆಸಿದ್ದು, ರೇಪಿಸ್ಟ್ ರಮೇಶ್‌ರನ್ನು ಅರೆಸ್ಟ್ ಮಾಡಿ ಎಂದು ಒತ್ತಾಯಿಸಿದ್ದಾರೆ. ಅದರೆ, ಬಿಜೆಪಿ ನಾಯಕತ್ವ ಬದಲಾವಣೆಯ ಬಗ್ಗೆ ಒಂದೂ ಮಾತನಾಡಿಲ್ಲ. ಈ ಹಿಂದೆ ಮೇ ವೇಳೆಗೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ ಬಿಜೆಪಿ ನಾಯಕತ್ವ ಬದಲಾವಣೆಯ ಬಗ್ಗೆ ತಮ್ಮ ಊಹೆಗಳು ಫಲಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಈ ವಿಚಾರವಾಗಿ ಮೌನತಾಳಿದ್ದಾರೆ ಎನ್ನಲಾಗಿದೆ. ಇನ್ನು ಡಿಕೆಶಿ ಅವರು ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ನಾವು ಮಾತನಾಡುವುದಿಲ್ಲ ಎನ್ನುತ್ತಲೇ ಬಂದಿದ್ದಾರೆ.
ಆದರೆ, ಇದೀಗ ಯಡಿಯರಪ್ಪರನ್ನು ಪದಚ್ಯುತಿಗೊಳಿಸಲು ಸಿಪಿ ಯೋಗೇಶ್ವರ್ ಅವರೇ ಮುಂದೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಯೋಗೇಶ್ವರ್ ಅವರ ಪರಮ ವಿರೋಧಿಯಾಗಿರುವ ಡಿಕೆಶಿ, ಈಗಲಾದರೂ ಮಾತನಾಡಬಹುದು ಎಂದು ಊಹಿಸಲಾಗಿತ್ತು. ಆದರೆ, ಅವರು ಆ ಬಗ್ಗೆ ಯಾವುದೇ ಮಾತನ್ನೂ ಆಡಿಲ್ಲ.
ಸದ್ಯಕ್ಕೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದರೆ ಕಾಂಗ್ರೆಸ್ ನಾಯಕರಿಗೆ ಹೆಚ್ಚು ಲಾಭ ಎನ್ನಲಾಗುತ್ತಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾದರೂ ಚುನಾವಣೆ ವೇಳೆ ಕಾಂಗ್ರೆಸ್ ಗೆ ಲಾಭವಾಗಲಿದೆ. ಕುರ್ಚಿ ಕಿತ್ತಾಟದಲ್ಲಿ ಸರ್ಕಾರ ಹೆಚ್ಚು ಕಡಿಮೆಯಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೂ ಕಾಂಗ್ರೆಸ್ ಗೆ ಲಾಭ. ಸಂಕಷ್ಟ ಸಂದರ್ಭದಲ್ಲಿ ಜನರಿಗೆ ಸ್ಪಂಧಿಸದೆ ಅಧಿಕಾರಕ್ಕಾಗಿ ಕಿತ್ತಾಟದಲ್ಲಿ ಕಾಲ ಕಳೆದರು ಎಂಬ ಡ್ಯಾಮೇಜ್ ನಿಂದ ಬಿಜೆಪಿಗೆ ಹಾನಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನೀನು ಪವರ್‌ಫುಲ್ ಸಂಸದ, ತಾಕತ್ತಿದ್ರೆ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿಸು; ಪ್ರತಾಪ್ ಸಿಂಹಗೆ ಜಿಟಿಡಿ ಸವಾಲು
ಅಲ್ಲದೆ, 10 ವರ್ಷಗಳ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ, ಬಿಜೆಪಿ ರೆಸಾರ್ಟ್ ರಾಜಕೀಯಕ್ಕಿಳಿದಿತ್ತು. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಸದಾನಂದಗೌಡರನ್ನು ಸಿಎಂ ಮಾಡಲಾಯಿತು. ನಂತರ, ಜಗದೀಶ್ ಶೆಟ್ಟರ್ ಸಿಎಂ ಗಾದಿಗೆರಿದ್ದರು. ಈ ಇಬ್ಬರು ಎರಡು ವರ್ಷದಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಮುಖ್ಯಮಂತ್ರಿಗಳಾದರು. ಬಿಜೆಪಿಯ ರಾಜಕೀಯ ಬೆಳವಣಿಗೆಗಳಿಂದ ಬೆಸತ್ತ ಜನ ಕಾಂಗ್ರೆಸ್ ಗೆ ನಿರಾಯಾಸವಾಗಿ ಅಧಿಕಾರ ನೀಡಿದ್ದರು.
ಈಗಲೂ ಅದೇ ಪರಿಸ್ಥಿತಿ ಇದೆ. ಬಿಜೆಪಿ ತಾನಾಗಿಯೇ ಇಮೇಜ್ ಹಾಳು ಮಾಡಿಕೊಳ್ಳುತ್ತಿದೆ. ಇದು ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದು ಕೈ ನಾಯಕರು ಭಾವಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಆ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕರು ಬಿಜೆಪಿ ವಿಚಾರದಲ್ಲಿ ಮೌನವಾಗಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಆದರೆ, ಕಾಂಗ್ರೆಸ್‌ನಲ್ಲಿಯೂ ಈಗಾಗಲೇ ಮುಂದಿನ ಮುಖ್ಯಮಂತ್ರಿಯಾರು ಎಂಬ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಮತ್ತೆ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ. ಡಿಕೆಶಿ ಬೆಂಬಲಿಗರು ಡಿಕೆಶಿಯೇ ಮುಂದಿನ ಮುಖ್ಯಮಂತ್ರಿಯಾಗಬೇಕು ಎನ್ನುತ್ತಿದ್ದಾರೆ. ಈ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕೀಯಕ್ಕೆ ಮರಳಬೇಕು ಎಂಬ ಒತ್ತಾಯಗಳೂ ಇವೆ. ಹೀಗಾಗಿ ಸಿಎಂ ಗಾದಿಗೆ ಕಾಂಗ್ರೆಸ್‌ನಲ್ಲಿ ಗುದ್ದಾಟ ನಡೆಯಬಹುದು ಎಂಬ ಅಭಿಪ್ರಾಯಗಳೂ ಇವೆ.
ಇದನ್ನೂ ಓದಿ: ಲಾಕ್‌ಡೌನ್ ಸಡಿಲಿಕೆ ಸಾಧ್ಯವೇ ಇಲ್ಲ; ಜೂನ್ 07ರ ನಂತರವೂ ಲಾಕ್‌ಡೌನ್ ಮುಂದುವರೆಯುತ್ತೆ: ಸುಳಿವುಕೊಟ್ಟ ಗೃಹ ಸಚಿವ

