ಇಂಧನ ಬೆಲೆ ಏರಿಕೆ: ಕಾಂಗ್ರೆಸ್‌ನಿಂದ ಐದು ದಿನಗಳ ಕಾಲ 100 ನಾಟೌಟ್‌ ಪ್ರತಿಭಟನೆ!

ಕೊರೊನಾ ಲಾಕ್‌ಡೌನ್‌ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. ಈಗಾಗಲೇ ರಾಜ್ಯದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ ದಾಟಿದೆ. ಹೀಗಾಗಿ ಕೇಂದ್ರದ ವಿರುದ್ದ ಐದು ದಿನಗಳ ಕಾಲ 100 ನಾಟೌಟ್‌ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಸಿದ್ದತೆ ನಡೆಸುತ್ತಿದೆ.

ಶುಕ್ರವಾರದಿಂದ ಐದು ದಿನಗಳ ಕಾಲ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದ್ದು, ಐದು ದಿನಗಳಲ್ಲಿ ಐದು ಸಾವಿರ ಪ್ರತಿಭಟನೆಗಳನ್ನು ಆಯೋಜಿಸಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮನೆ ಬಳಕೆ ಹಾಗೂ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಕಳೆದ 13 ತಿಂಗಳಿನಲ್ಲಿ ಪೆಟ್ರೋಲ್ 25.72 ರೂ. ಡೀಸೆಲ್ 23.93 ರೂಪಾಯಿಗೆ ಹೆಚ್ಚಾಗಿದೆ. ಕಳೆದ ಐದು ತಿಂಗಳಿನಲ್ಲಿ 43 ಬಾರಿ ದರಗಳನ್ನು ಹೆಚ್ಚಿಸಲಾಗಿದೆ. ಇದು ಕೇಂದ್ರ ಸರ್ಕಾರದ ಕೃಪಾಪೋಷಿತ ಲೂಟಿ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಶೇ.7ಕ್ಕಿಂತ ಇಳಿಕೆ; 5 ಹಂತಗಳಲ್ಲಿ ಅನ್‌ಲಾಕ್‌ ಪ್ರಕ್ರಿಯೆ: ಸಚಿವ ಅಶೋಕ್‌

ದರ ಏರಿಕೆಯ ವಿರುದ್ಧ ನಾಳೆ (ಜೂನ್‌ 11) ಜಿಲ್ಲಾ ಕೇಂದ್ರಗಳಲ್ಲಿ, ಜೂ.12ರಂದು ತಾಲ್ಲೂಕು ಕೇಂದ್ರಗಳಲ್ಲಿ, 13ರಂದು ಹೋಬಳಿ ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ, 14ರಂದು ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ.

ಕೊನೆಯ ದಿನವಾದ ಜೂ.15 ರಂದು ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ. ಜೂನ್ 16ರಂದು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ದುಬಾರಿ ತೆರಿಗೆಯನ್ನು ಕಡಿತ ಮಾಡಲು ಒತ್ತಾಯಿಸಿಬೇಕೆಂದು ಆಗ್ರಹ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ.

ಪ್ರತಿಭಟನೆಯ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು, ತೈಲಬೆಲೆ ಏರಿಕೆಯನ್ನು ವಿರೋಧಿಸುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಲಾಗಿದೆ.

ಪ್ರತಿಭಟನೆಯಲ್ಲಿ ಸ್ಥಳೀಯ ಹಿರಿಯ ನಾಯಕರು, ಪಕ್ಷದ ಪದಾಧಿಕಾರಿಗಳು, ಶಾಸಕರು, ಕಳೆದ ವಿಧಾನಸಭೆ ಚುನಾವಣೆಯ ಆಭ್ಯರ್ಥಿಗಳು, ಪದಾಧಿಕಾರಿಗಳು, ಕೆಪಿಸಿಸಿ ಸದಸ್ಯರು, ಸಂಸದರು, ಮಾಜಿ ಸಂಸದರು ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮಾತ್ರವಲ್ಲ ರಾಜಸ್ಥಾನದಲ್ಲೂ ಬಿಜೆಪಿ ಅಂತರ್ಯುದ್ಧ; ಹೋರ್ಡಿಂಗ್‌ನಿಂದ ಬಹಿರಂಗ!

Spread the love

Leave a Reply

Your email address will not be published. Required fields are marked *