Fact Check: ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ಮೈಗಂಟಿಕೊಂಡ ಚಮಚ ಮತ್ತು ನಾಣ್ಯಗಳು..!
ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ತನ್ನಲ್ಲಿ ಮ್ಯಾಗ್ನೆಟಿಕ್ ಪವರ್ ಹೆಚ್ಚಾಗಿದೆ ಎಂದು ಜಾರ್ಖಂಡ್ ವ್ಯಕ್ತಿ ಹೇಳಿಕೊಂಡಿದ್ದಾನೆ. ಆದರೆ, ವೈದ್ಯಾಧಿಕಾರಿಗಳು ಅದನ್ನು ನಿರಾಕರಿಸಿದ್ದು, ಆತನ ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನವೈರಸ್ ಕಾಯಿಲೆಯ ವಿರುದ್ಧ ಲಸಿಕೆ ಪಡೆದ ಅನೇಕರು ತಮ್ಮ ದೇಹದಲ್ಲಿ ‘ಕಾಂತೀಯ ಶಕ್ತಿ’ ಹೆಚ್ಚಾಗಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಮಡಿದ್ದಾರೆ. ಇತ್ತೀಚಿನ ಪ್ರಕರಣದಲ್ಲಿ, ಜಾರ್ಖಂಡ್‌ನ ಹಜಾರಿಬಾಗ್‌ನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ತಮ್ಮ ದೇಹದಲ್ಲಿ ಕಾಂತೀಯ ಶಕ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ತಾಹಿರ್ ಅನ್ಸಾರಿ ಅವರು ಶನಿವಾರ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡರು. ಬಳಿಕ ತಾನು ಕಾಂತೀಯ ಶಕ್ತಿಯನ್ನು ಅಭಿವೃದ್ಧಿಪಡಿಸಿದ್ದೇನೆ ಎಂದು ಹೇಳಿಕೊಂಡು ವಿಡಿಯೋ ಹಂಚಿಕೊಂಡಿದ್ದಾರೆ.
ತಾಹೀರ್ ಅನ್ಸಾರಿ ಅವರು ಚಮಚಗಳು, ಫೋರ್ಕ್ಸ್ ಮತ್ತು ನಾಣ್ಯಗಳನ್ನು ಬಳಸುವ ಮೂಲಕ ತಮ್ಮ ದೇಹದಲ್ಲಿ ಮ್ಯಾಗ್ನೆಟಿಕ್ ಪವರ್ ಅಧಿಕವಾಗಿರುವ ಬಗ್ಗೆ ತೋರಿಸಿದ್ದಾರೆ. ತಾಹೀರ್ ಅನ್ಸಾರಿ ಅವರ ಮನೆಗೆ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದೆ.
ತಪಾಸಣೆಯ ನಂತರ, ಡಾ ಎಸ್.ಕೆ.ವೇದ ರಾಜನ್ ತಾಹೀರ್ ಅವರ ದೇಹದಲ್ಲಿ ಯಾವುದೇ ಕಾಂತೀಯ ಶಕ್ತಿ ಹೆಚ್ಚಳ ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು 48 ಗಂಟೆಗಳ ಕಾಲ ಮನೆಯಲ್ಲಿಯೇ ಇರಬೇಕೆಂದು ಹೇಳಿದ್ದಾರೆ.
ಈ ಹೇಳಿಕೆಗಳನ್ನು ನಿರಾಕರಿಸಿದ ಕೇಂದ್ರ ಸ್ಪಷ್ಟೀಕರಣದೊಂದಿಗೆ ಕೋವಿಡ್ -19 ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಯಾವುದೇ ಲೋಹ ಆಧಾರಿತ ಘಟಕಾಂಶವನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.
ಕಾಂತೀಯ ಮಹಾಶಕ್ತಿಗಳನ್ನು ನೀಡುವ ಕೋವಿಡ್ -19 ಲಸಿಕೆಗಳ ಬಗ್ಗೆ ಹೇಳಿಕೆಗಳು ಆಧಾರರಹಿತ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (ಪಿಐಬಿ) ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದೆ.
“ಲಸಿಕೆಗಳು ಮಾನವ ದೇಹದಲ್ಲಿ ಕಾಂತೀಯ ಪ್ರತಿಕ್ರಿಯೆಯನ್ನು ಉಂಟುಮಾಡುವುದಿಲ್ಲ. ಕೋವಿಡ್ -19 ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಮತ್ತು ಯಾವುದೇ ಲೋಹ ಆಧಾರಿತ ಪದಾರ್ಥಗಳನ್ನು ಹೊಂದಿರುವುದಿಲ್ಲ” ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಂಡ ತಿಳಿಸಿದೆ.

