FACT CHECK | ನಮಾಜ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಹಲ್ಲೆ ಮಾಡಿದ ಘಟನೆ ಪಾಕ್ನಲ್ಲಿ ನಡೆದಿದೆಯೇ?
ಪಾಕಿಸ್ತಾನದಲ್ಲಿ ಶಿಪ್ಪಿಂಗ್ ಕಂಟೈನರ್ ಮೇಲ್ಭಾಗದಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.
‘‘ಹಲೋ, ಭಾರತದ ಮುಸಲ್ಮಾನರೇ, ಎಲ್ಲಿಬೇಕೆಂದರಲ್ಲಿ ನಮಾಜ್ ಮಾಡುತ್ತಿರುವ ವ್ಯಕ್ತಿಯನ್ನ ಇಸ್ಲಾಮಿಕ್ ದೇಶವಾದ ಪಾಕಿಸ್ತಾನದಲ್ಲಿ ಪೋಲಿಸರು ಏನು ಮಾಡಿದರು ನೋಡಿ..’’ ಎಂದು ಫೇಸ್ಬುಕ್ನಲ್ಲಿ ಕೆಲ ಬಳಕೆದಾರರು ವಿಡಿಯೋವೊಂದನ್ನು ಹಂಚಿಕೊಂಡು, ವಿಡಿಯೊದಲ್ಲಿ ಕಂಟೈನರ್ ಮೇಲೆ ಕಾಲು ಚಾಚಿ ಕುಳಿತಿರುವ ವ್ಯಕ್ತಿಯೊಬ್ಬರನ್ನು ಕಾಣಬಹುದು. ಆಗ ಅಲ್ಲಿ ಪೊಲೀಸ್ ಸಿಬ್ಬಂದಿ ಬಂದು ಮಾತಿನ ಚಕಮಕಿ ನಡೆಯುತ್ತದೆ. ಬಳಿಕ ಆ ವ್ಯಕ್ತಿಯನ್ನು ಒಬ್ಬ ಪೊಲೀಸ್ ಅಧಿಕಾರಿ ಕಂಟೈನರ್ನಿಂದ ಕೆಳಗೆ ತಳ್ಳುವುದನ್ನು ನೋಡಬಹುದು.
ಇದೇ ರೀತಿಯ ಹೇಳಿಕೆಯೊಂದಿಗಿನ ವೈರಲ್ ಪೋಸ್ಟ್ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ನವೆಂಬರ್ 27, 2024 ರಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ನ ಎಕ್ಸ್ ಹ್ಯಾಂಡಲ್ನಲ್ಲಿ ವಿಡಿಯೋವೊಂದು ಲಭ್ಯವಾಗಿದೆ.
ಇಮ್ರಾನ್ ಖಾನ್ ಅವರು PTI ರಾಜಕೀಯ ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷರಾಗಿದ್ದಾರೆ. ಎಕ್ಸ್ನಲ್ಲಿ ಹೀಗೆ ಬರೆಯಲಾಗಿದೆ: ‘‘ಮುಗ್ಧ, ಅಮಾಯಕ ಪ್ರತಿಭಟನಾಕಾರನು ಕಂಟೇನರ್ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಸಶಸ್ತ್ರ ಅರೆಸೈನಿಕ ಅಧಿಕಾರಿಯೊಬ್ಬರು ಮೂರು ಮಹಡಿಗಳಿಗೆ ಸಮಾನವಾದ ಎತ್ತರದಿಂದ ಕ್ರೂರವಾಗಿ ಅವರನ್ನು ತಳ್ಳಿದ್ದಾರೆ. ಈ ಆಘಾತಕಾರಿ ಕ್ರೂರ ಕೃತ್ಯವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ: ಅಧಿಕಾರಿಗಳು, ಮಿಲಿಟರಿಯಲ್ಲಿನ ಮೇಲಧಿಕಾರಿಗಳು, ಮೊಹ್ಸಿನ್ ನಖ್ವಿ ಮತ್ತು PML-N ಈ ಭಯಾನಕ ಹಿಂಸಾಚಾರದ ಮೂಲಕ ಮತ್ತು ಅವರು ತಮ್ಮ ನಾಗರಿಕರಿಗೆ, ಅಸಂಖ್ಯಾತ ಇತರ ಜನರಿಗೆ ಏನನ್ನು ಹೇಳಲು ಹೊರಟಿದ್ದೀರಿ’’ ಎಂದು ಬರೆದುಕೊಂಡಿದೆ.
ಈ ಸುಳಿವನ್ನು ತೆಗೆದುಕೊಂಡು, ಸಂಬಂಧಿತ ಕೀವರ್ಡ್ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಇಂಡಿಪೆನ್ಡೆಂಟ್ ವೆಬ್ಸೈಟ್ ನವೆಂಬರ್ 28, 2024 ರಂದು ಪ್ರಕಟಿಸಿದ ವರದಿ ಲಭ್ಯವಾಗಿದೆ.
ಇದರಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದ ಭದ್ರತಾ ಪಡೆಗಳು ಸುಮಾರು 1,000 ಪ್ರತಿಭಟನಕಾರನನ್ನು ಬಂಧಿಸಿದ ಸಂದರ್ಭ 25 ಅಡಿ ಎತ್ತರದ ಶಿಪ್ಪಿಂಗ್ ಕಂಟೈನರ್ಗಳ ಗೋಪುರದಿಂದ ಪ್ರತಿಭಟನಾಕಾರನನ್ನು ತಳ್ಳಿದರು ಎಂದು ವರದಿ ಹೇಳಿದೆ. ಇಸ್ಲಾಮಾಬಾದ್ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ ಘಟನೆಗೆ ಇದು ಸಂಭವಿಸಿದೆ. ಜಾಗರಣ್ ಇಂಗ್ಲೀಷ್ ಕೂಡ ಇದೇ ಘಟನೆಯನ್ನು ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಸ್ಲಾಮಾಬಾದ್ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, 25 ಅಡಿ ಎತ್ತರದ ಶಿಪ್ಪಿಂಗ್ ಕಂಟೈನರ್ಗಳ ಗೋಪುರದಿಂದ ಪ್ರತಿಭಟನಾಕಾರನನ್ನು ಕೆಳಗೆ ತಳ್ಳಿರುವ ಘಟನೆಯನ್ನು ಸುಳ್ಳು ಪ್ರತಿಪಾದನೆಯೊಂದಿಗೆ, ಪಾಕಿಸ್ತಾನದಲ್ಲಿ ಶಿಪ್ಪಿಂಗ್ ಕಂಟೈನರ್ ಮೇಲ್ಭಾಗದಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ :FACT CHECK | ತುಪ್ಪದ ಬಾಕ್ಸ್ಗಳಲ್ಲಿ ಅಕ್ರಮವಾಗಿ ಪಿಸ್ತೂಲ್ಗಳನ್ನು ಬಚ್ಚಿಟ್ಟಿದ್ದು ಮುಸ್ಲಿಮರಲ್ಲ, ಮತ್ತ್ಯಾರು?

