FACT CHECK | ತುಪ್ಪದ ಬಾಕ್ಸ್ಗಳಲ್ಲಿ ಅಕ್ರಮವಾಗಿ ಪಿಸ್ತೂಲ್ಗಳನ್ನು ಬಚ್ಚಿಟ್ಟಿದ್ದು ಮುಸ್ಲಿಮರಲ್ಲ, ಮತ್ತ್ಯಾರು?
ತುಪ್ಪದ ಡಬ್ಬಗಳಲ್ಲಿ ಪಿಸ್ತೂಲ್ಗಳನ್ನು ಬಚ್ಚಿಟ್ಟುಕೊಂಡಿದ್ದ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಕೆಲವರು ತುಪ್ಪದ ಬಾಕ್ಸ್ನಿಂದ ಪಿಸ್ತೂಲ್ ತೆಗೆಯುತ್ತಿರುವುದನ್ನು ಕಾಣಬಹುದು.
‘‘ಈ ಶಾಂತಿ ದೂತರು ಮುಸ್ಲಿಂ ಧರ್ಮದವರು ಕಾಫಿರರನ್ನ (ಹಿಂದುಗಳನ್ನು) ಹೊಡೆಯಲಿಕ್ಕೆ ಯಾವ ತರಹದ ಆಯುಧಗಳನ್ನು ತರುತ್ತಿದ್ದಾರೆ ನೋಡಿ, ಸರಿಯಾದ ಸಮಯಕ್ಕೆ ಪೊಲೀಸರು ಹಿಡಿಯುತ್ತಾರೆ ಇಲ್ಲದಿದ್ದರೆ. ಲೇ ಜಾತಿ ತೂತು ಹಿಂದುಗಳೇ ಅವರು ಜಾತಿ ಕೇಳಿ ಹೊಡೆಯೋಲ್ಲ ಅರ್ಥ ಮಾಡ್ಕೊಳಿ’’ ಎಂದು ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ಬರೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸ್ಕ್ರೀನ್ಶಾಟ್ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 27 ಸೆಪ್ಟೆಂಬರ್ 2019 ರಂದು ದೆಹಲಿ ತಕ್ನ ಯೂಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ.
“ದೆಹಲಿಯಲ್ಲಿ ಕಳ್ಳಸಾಗಣೆ, ತುಪ್ಪದ ಪೆಟ್ಟಿಗೆಗಳಲ್ಲಿ ಪಿಸ್ತೂಲ್” ಎಂದು ವೀಡಿಯೋ ಜೊತೆಗಿನ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಅಲ್ಲದೆ ಬಂಧಿತರಿಬ್ಬರ ಹೆಸರುಗಳು – ಜಿತೇಂದ್ರ ಜೀತು ಮತ್ತು ರಾಜ್ ಬಹದ್ದೂರ್ ಎಂದು ವೀಡಿಯೊದಲ್ಲಿ ಹೇಳಲಾಗಿದೆ.
ಮತ್ತಷ್ಟು ಮಾಹಿತಿಗಾಗಿ ಕೀವರ್ಡ್ ಸರ್ಚ್ ಆಡಿದಾಗ, 26 ಸೆಪ್ಟೆಂಬರ್ 2019 ವೈರಲ್ ವೀಡಿಯೊದ ಸ್ಕ್ರೀನ್ಶಾಟ್ ಅನ್ನು ಒಳಗೊಂಡಿರುವ NDTV ಯಲ್ಲಿ ಪ್ರಕಟವಾದ ಸುದ್ದಿಯೊಂದು ಲಭ್ಯವಾಗಿದೆ. ವರದಿಯ ಪ್ರಕಾರ, ‘‘ದೆಹಲಿ ಪೊಲೀಸ್ ವಿಶೇಷ ತಂಡವು ತುಪ್ಪದ ಕ್ಯಾನ್ಗಳಲ್ಲಿ ಬಚ್ಚಿಟ್ಟ 26 ಪಿಸ್ತೂಲ್ಗಳೊಂದಿಗೆ ಗಾಜಿಪುರ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಿದೆ. ಮಧ್ಯಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರ ದೆಹಲಿಯ ಘಾಜಿಪುರ ಪ್ರದೇಶಕ್ಕೆ ಬರಲಿದ್ದಾರೆ ಎಂದು ಅವರ ತಂಡಕ್ಕೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ ಮಹೀಂದ್ರಾ ಬೊಲೇರಾ ಕಾರನ್ನು ತಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಿತೇಂದ್ರ ಮತ್ತು ರಾಜಬಹದ್ದೂರ್ ಅವರನ್ನು ವಶಕ್ಕೆ ಪಡೆದು ಕಾರಿನೊಳಗಿಂದ ಎರಡು ತುಪ್ಪದ ಡಬ್ಬಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಿಬ್ಬರೂ ಮಧ್ಯಪ್ರದೇಶದ ಭಿಂಡ್ ನಿವಾಸಿಗಳು’’ ಎಂದು ವಿಶೇಷ ದಳದ ಡಿಸಿಪಿ ಪ್ರಮೋದ್ ಕುಶ್ವಾಹಾ ಹೇಳಿಕೆಯನ್ನು ಉಲ್ಲೇಖಿಸಿದೆ.
ಈ ಪ್ರಕರಣದ ಕುರಿತು ಅನೇಕ ವರದಿಗಳನ್ನು ಲಭ್ಯವಾಗಿವೆ. ಎಲ್ಲ ಸುದ್ದಿಯಲ್ಲಿಯೂ ಸಿಕ್ಕಿಬಿದ್ದವರ ಹೆಸರನ್ನು ಜಿತೇಂದ್ರ ಜೀತು ಮತ್ತು ರಾಜ್ ಬಹದ್ದೂರ್ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ತುಪ್ಪದ ಪೆಟ್ಟಿಗೆಗಳಲ್ಲಿ ಪಿಸ್ತೂಲ್ಗಳು ಪತ್ತೆಯಾದ ಪ್ರಕರಣವು 2019 ರದ್ದಾಗಿದ್ದು, ಪ್ರಕರಣದಲ್ಲಿ ಬಂಧಿತರಾದ ಇಬ್ಬರೂ ಹಿಂದೂಗಳು, ಮುಸ್ಲಿಮರಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ತುಪ್ಪದ ಪೆಟ್ಟಿಗೆಯಲ್ಲಿ ಪಿಸ್ತೂಲ್ಗಳನ್ನು ಬಚ್ಚಿಟ್ಟುಕೊಂಡಿದ್ದ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು 2019ರ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಾಸ್ತವವಾಗಿ ಅಕ್ರಮ ಪಿಸ್ತೂಲ್ಗಳನ್ನು ಸಾಗಾಟ ಮಾಡುತ್ತಿದ್ದವರು ಮುಸ್ಲಿಮರಲ್ಲ, ಅವರು ಹಿಂದೂಗಳು. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲೋಕಸಭೆ ಕಲಾಪದ ವೇಳೆ ನಿದ್ದೆ ಮಾಡಿದ್ರಾ ರಾಹುಲ್? ವೈರಲ್ ವಿಡಿಯೋದ ವಾಸ್ತವವೇನು?

