FACT CHECK | BJP ಗೆ ಮತ ಹಾಕಬೇಡಿ ಎಂದು ಬಾಲಿವುಡ್ ನಟ ಪ್ರಚಾರ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?
ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ನಟ ಪಂಕಜ್ ತ್ರಿಪಾಠಿ ಬಿಜೆಪಿಗೆ ಮತ ಹಾಕಬೇಡಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ನಟ ಪಂಕಜ್ ತ್ರಿಪಾಠಿ ಕಡಲೆಕಾಯಿ ಮಾರಾಟಗಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘‘ನಾವು ಕಡಲೆಕಾಯಿಯನ್ನು ಮಾರಾಟ ಮಾಡುತ್ತೇವೆ, ನಮ್ಮ ಬುದ್ಧಿವಂತಿಕೆಯನ್ನು ಅಲ್ಲ. ಈ ಸಂದೇಶವನ್ನು ನೋಡಿ. ಬಿಜೆಪಿಯವರು ಮತ ನೀಡಿ, ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ. ಅವರಿಗೆ ಮತ ಹಾಕುತ್ತೇವೆ, ಇನ್ನೊಂದು ಕಡೆ ಸರ್ಕಾರದ ಹಣ ನಾಪತ್ತೆಯಾಗುತ್ತದೆ. ನಾನು ಕಡಲೆಕಾಯಿ ಪ್ರಿಯ, ನಾನು ಮೂರ್ಖನಲ್ಲ. ನೆನಪಿಡಿ, ಬಿಜೆಪಿಯವರು ಏನಾದರೂ ಆಮಿಷ ಒಡ್ಡಿದರೆ, ನಾನು ಮೂರ್ಖನಲ್ಲ ಎಂದು ಹೇಳಿ’’ ಎಂಬುದು ಈ ವೈರಲ್ ವಿಡಿಯೋದಲ್ಲಿದೆ.
ಆಮ್ ಆದ್ಮಿ ಪಕ್ಷವು ಡಿಸೆಂಬರ್ 5 ರಂದು ಈ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಆದರೆ, ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಅವರ ಖಾತೆಯಿಂದ ಅಳಿಸಲಾಗಿದೆ. ಇದಲ್ಲದೆ, AAP ರಾಜಸ್ಥಾನ , AAP ಸೀಲಂಪುರ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಸೆಪ್ಟೆಂಬರ್ 23, 2024 ರಂದು ಯುಪಿಐಯ ಅಧಿಕೃತ ಫೇಸ್‌ಬುಕ್ ಖಾತೆಯ ಪೋಸ್ಟ್‌ನಲ್ಲಿ ಹಂಚಿಕೊಂಡ ವಿಡಿಯೋವೊಂದು ಲಭ್ಯವಾಗಿದೆ.
ಲಭ್ಯವಾಗಿವ ವಿಡಿಯೋ ಕೂಡ ವೈರಲ್ ವಿಡಿಯೋವನ್ನು ಹೋಲುತ್ತದೆ. ಆದರೆ, ಇದರಲ್ಲಿ ಪಂಕಜ್ ಯುಪಿಐ ವಂಚನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಡೀ ವಿಡಿಯೋದಲ್ಲಿ ಅವರು ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಎಲ್ಲಿಯೂ ಹೇಳಿಲ್ಲ.
ನೈಜ ವಿಡಿಯೋದಲ್ಲಿ ನಟ ಪಂಕಜ್ ತ್ರಿಪಾಠಿ ತನ್ನ ಮೊಬೈಲ್‌ನ ಡಿಸ್ಪ್ಲೇ ತೋರಿಸುತ್ತಾರೆ. ಆಗ ಅವರ ಮೊಬೈಲ್‌ಗೆ ಬಂದ ಸಂದೇಶದಲ್ಲಿ, ‘‘ವಿನ್ನರ್. ಅಭಿನಂದನೆಗಳು! ನೀವು 25,00,000 ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದೀರಿ! ನಿಮ್ಮ ಬಹುಮಾನವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ,’’ ಎಂದು ಬರೆದಿರುತ್ತದೆ. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಈ ಸಂದೇಶದ ಬದಲು ‘ವೋಟ್ ಫಾರ್ ಬಿಜೆಪಿ’ ಎಂದು ಬಿಜೆಪಿ ಚಿಹ್ನೆಯೊಂದಿಗೆ ಫೋನ್‌ನಲ್ಲಿ ಬರೆಯಲಾಗಿದೆ. ಎರಡೂ ವೀಡಿಯೋಗಳನ್ನು ಹೋಲಿಕೆ ಮಾಡಿದರೆ ವೈರಲ್ ವಿಡಿಯೋದಲ್ಲಿ ಎಡಿಟಿಂಗ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ನವೆಂಬರ್ 2023 ರಲ್ಲಿ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪಂಕಜ್ ತ್ರಿಪಾಠಿ ಅವರನ್ನು ಯುಪಿಐ ಸುರಕ್ಷತಾ ರಾಯಭಾರಿಯಾಗಿ ನೇಮಿಸಿತು ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ‘ನಾನು ಮೂರ್ಖನಲ್ಲ’ ಎಂಬ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿತು. ಡಿಜಿಟಲ್ ಪಾವತಿಗೆ ಸಂಬಂಧಿಸಿದ ಹಗರಣಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇದೇ ಅಭಿಯಾನದಡಿ ಬಿಡುಗಡೆಯಾದ ಜಾಹೀರಾತಿನಲ್ಲಿ ಕಡಲೆಕಾಯಿ ಮಾರಾಟಗಾರನ ಪಾತ್ರ ನಿರ್ವಹಿಸುತ್ತಿರುವ ಪಂಕಜ್ ತ್ರಿಪಾಠಿ ಅವರು ಲಾಟರಿ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವಿಡಿಯೋ ಸದ್ಯ ಎಡಿಟಿಂಗ್ ಮೂಲಕ ವೈರಲ್ ಆಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನಟ ಪಂಕಜ್ ತ್ರಿಪಾಠಿ UPI ಜಾಹೀರಾತಿನಲ್ಲಿ ಅಭಿನಯಿಸಿರುವ ವಿಡಿಯೋವನ್ನು ಎಡಿಟ್ ಮಾಡಿ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿರುವಂತೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಲೋಕಸಭೆ ಕಲಾಪದ ವೇಳೆ ನಿದ್ದೆ ಮಾಡಿದ್ರಾ ರಾಹುಲ್? ವೈರಲ್ ವಿಡಿಯೋದ ವಾಸ್ತವವೇನು?

