ಒಂದೇ ತಾಲ್ಲೂಕಿನ 15 ಶಾಲೆಗಳಿಗೆ ಒಬ್ಬರೂ ಶಿಕ್ಷಕರೇ ಇಲ್ಲ; 41 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು!

ಶಾಲಾ-ಕಾಲೇಜುಗಳ ತರಗತಿಗಳು ಆರಂಭವಾಗುತ್ತಿವೆ. ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದಾರೆ. ಆದರೆ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದೆ, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ತಾಲ್ಲೂಕಿನ 15 ಶಾಲೆಗಳಲ್ಲಿ ಒಬ್ಬರೂ ಕೂಡ ಶಿಕ್ಷಕರಿಲ್ಲದಂತಾಗಿದ್ದು, ಈ ಶಾಲೆಗಳಿಗೆ ಬೇರೆ ಶಾಲೆಯ ಒಬ್ಬೊಬ್ಬ ಶಿಕ್ಷಕರನ್ನು ಹೊಂದಾಣಿಕೆಯ ಮೇಲೆ ನಿಯೋಜಿಸಲಾಗಿದೆ. ಅಲ್ಲದೆ, 41 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ತಾಲ್ಲೂಕಿನಲ್ಲಿ 268 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 39,589 ವಿದ್ಯಾರ್ಥಿಗಳಿದ್ದಾರೆ. 1,318 ಶಿಕ್ಷಕ ಹುದ್ದೆಗಳು ಮುಂಜೂರಾಗಿದ್ದು, 858 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 460 ಹುದ್ದೆಗಳು ಖಾಲಿ ಇವೆ. 50 ಶಾಲೆಗಳಲ್ಲಿ ಬೋಧನಾ ಕೊಠಡಿಗಳ ಕೊರತೆ, 55 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 80 ಶಾಲೆಗಳಲ್ಲಿ ಶೌಚಾಲಯವಿಲ್ಲ. 95 ಶಾಲೆಗಳಿಗೆ ಕಾಂಪೌಂಡ್ ಇಲ್ಲ ಎಂದು ವರದಿಯಾಗಿದೆ.

ಅಲ್ಲದೆ, ತಾಲ್ಲೂಕಿನ 25 ಸರ್ಕಾರಿ ಪ್ರೌಢಶಾಲೆಗಳಲ್ಲಿ 14,607 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 276 ಶಿಕ್ಷಕ ಹುದ್ದೆಗಳು ಮುಂಜೂರಾಗಿವೆ. ಆದರೆ, 209 ಶಿಕ್ಷಕರಿದ್ದಾರೆ. 67 ಹುದ್ದೆಗಳು ಖಾಲಿ ಇವೆ. 3 ಶಾಲೆಯಲ್ಲಿ ಕೊಠಡಿ, ಕುಡಿಯುವ ನೀರು, 6 ಕಡೆಗೆ ಶೌಚಾಲಯದ ಕೊರತೆಯಿದೆ. ಯಾವುದೇ ಶಾಲೆಯಲ್ಲೂ ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯವಿಲ್ಲದಿರುವುದು ಕಂಡು ಬಂದಿದೆ.

ಶೂನ್ಯ ಶಿಕ್ಷಕ ಶಾಲೆ: ಪುಣಬಘಟ್ಟ, ವಡ್ಡಿನ ದಾದಾಪುರ, ನಾಗರಕೊಂಡ, ಅರಸೀಕೆರೆ ಉರ್ದು ಶಾಲೆ, ಬಸವನಾಳು, ಪಾವನಪುರ, ಹನುಮಗೊಂಡನಹಳ್ಳಿ, ನಾಗಲಾಪುರ ತಾಂಡಾ, ಮಾದಿಹಳ್ಳಿ, ಉಚ್ಚಂಗಿದುರ್ಗ ಶಿಖರ, ಶ್ರೀಕಂಠಾಪುರ, ವಿ. ಕೊರಚರಹಟ್ಟಿ, ಅಣಿಮೇಗಳ ತಾಂಡಾ, ದಿದ್ಗಿ ತಾಂಡಾ, ಕೆಂಚಾಪುರದ ಶಾಲೆಗಳನ್ನು ಶೂನ್ಯ ಶಿಕ್ಷಕ ಶಾಲೆಗಳೆಂದು ಗುರುತಿಸಲಾಗಿದೆ.

ಏಕೋಪಾಧ್ಯಾಯ ಶಾಲೆ: ಕೊಂಗನಹೊಸೂರು, ಮಾಡ್ಲಗೇರೆ, ಮಾಚಿಹಳ್ಳಿ, ಮಾಡ್ಲಗೇರೆ ತಾಂಡಾ, ಗುಂಡಿನಕೇರಿ, ಹಗರಿಗುಡಿಹಳ್ಳಿ, ಕುಂಚೂರು ಕೆರೆ ತಾಂಡಾ, ಎಂ. ಕೊರಚರಹಟ್ಟಿ, ಉದ್ಗಟ್ಟಿ ಸಣ್ಣತಾಂಡಾ, ಕಾನಹಳ್ಳಿ, ಟಿ. ತುಂಬಿಗೇರಿ, ಹಲುವಾಗಲು ಆಶ್ರಯ ಕ್ಯಾಂಪ್, ಕರಡಿದುರ್ಗ, ಹೊನ್ನಾಪುರ, ಎ. ತಿಮ್ಲಾಪುರ, ನಾಗತಿಕಟ್ಟೆ ತಾಂಡಾ, ಕುರೆಮಾಗನಹಳ್ಳಿ, ಕೋಟೆ ಉಚ್ಚಂಗಿದುರ್ಗ, ಗಿಡ್ಡನಹಳ್ಳಿ, ಯರಬಳ್ಳಿ ತಾಂಡಾ, ರಾಮಘಟ್ಟ ತಾಂಡಾ, ನಾರಾಯಣಪುರ, ಅರಸಾಪುರ ಸೇರಿ 41 ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ.

ಇದನ್ನೂ ಓದಿ: ‘ಹಿಂದಿ ದಿವಸ’ ವಿರೋಧಿಸಿ ರಾಜ್ಯಾದ್ಯಂತ 1,500 ಸ್ಥಳಗಳಲ್ಲಿ ಕರವೇ ಪ್ರತಿಭಟನೆ!

Spread the love

Leave a Reply

Your email address will not be published. Required fields are marked *