ಶವಗಳು ತೇಲುತ್ತಿದ್ದ ಗಂಗಾ ನದಿಯಲ್ಲಿ ಈಗ ನವಜಾತ ಶಿಶು ಪತ್ತೆ!

ಉತ್ತರ ಪ್ರದೇಶದ ಕೊರೊನಾ ಸೋಂಕಿತರ ಶವಗಳು ತೇಲುತ್ತಿದ್ದ ಗಂಗಾ ನದಿಯಲ್ಲಿ ಇದೀಗ ನವಜಾತ ಶಿಸುವೊಂದು ತೇಲಿಬಂದಿದೆ. 22 ದಿನಗಳ ನವಜಾತ ಹೆಣ್ಣು ಮಗು ಗಾಜಿಪುರ ಜಿಲ್ಲೆಯ ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ಪತ್ತೆಯಾಗಿದೆ.

ಎಂದಿನಂತೆ ಜನರ ಸಂಚಾರವಿದ್ದ ಗಾಜಿಪುರದ ದಾದ್ರಿ ಘಾಟ್‌ನಲ್ಲಿ ದೋಣಿ ನಡೆಸುತ್ತಿದ್ದ ನಾವಿಕನಿಗೆ ನವಜಾತ ಶಿಶು ಅಳುತ್ತಿರುವ ಕೂಗು ಕೇಳಿದೆ. ಘಾಟ್‌ನಲ್ಲಿ ಯಾವುದೇ ಮಗು ಕಾಣಿಸದಿದ್ದರಿಂದ ನದಿಯ ಕಡೆಗೆ ಗಮನ ನೀಡಿದ್ದಾರೆ. ನದಿಯಲ್ಲಿ ತೇಲಿ ಬರುತ್ತಿದ್ದ ಮರದ ಪೆಟ್ಟಿಗೆಯಿಂದ ಅಳುವಿನ ಸದ್ದು ಬಂದಿದೆ. ಪೆಟ್ಟಿಗೆ ತೆಗೆದು ನೋಡಿದಾಗ ಒಳಗಡೆ ಹೆಣ್ಣು ಮಗು ಪತ್ತೆಯಾಗಿದೆ.

ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ಪತ್ತೆಯಾಗಿರುವ ನವಜಾತ ಶಿಶುವಿನ ಸಂಪೂರ್ಣ ಜವಾಬ್ದಾರಿಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಿಕೊಂಡಿದೆ. ಹೆಣ್ಣು ಶಿಶುವನ್ನು ಉಳಿಸಿದ ನಾವಿಕನಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ನಾವಿಕನಿಗೆ ವಸತಿ ಸೌಕರ್ಯ ನೀಡಿಲಿದೆ ಮತ್ತು ಅರ್ಹ ಯೋಜನೆಗಳಿಗೆ ಶಿಫಾರಸು ಮಾಡಿದೆ.

ನದಿಯಲ್ಲಿ ತೇಲಿಬಂದ ಮರದ ಪೆಟ್ಟಿಗೆಯಲ್ಲಿ ದುಪ್ಪಟ್ಟಾದಲ್ಲಿ ಸುತ್ತಿದ್ದ ನವಜಾತ ಶಿಶುವಿನೊಂದಿಗೆ, ದೇವರ ಪೋಟೋಗಳು, ಪೂಜಾ ಸಾಮಗ್ರಿಗಳು ಮತ್ತು ಮಗುವಿನ ಕುಂಡಲಿ, ಜಾತಕ ಪತ್ತೆಯಾಗಿವೆ. ಶಿಶುವಿನ ಹೆಸರನ್ನು ಜಾತಕದಲ್ಲಿ ಗಂಗಾ ಎಂದು ಬರೆಯಲಾಗಿದ್ದು, ಜಾತಕದಲ್ಲಿ ಮಗುವಿನ ವಯಸ್ಸು ಕೇವಲ ಮೂರು ವಾರಗಳು ಎಂದು ಬರೆದಿದೆ ಎನ್ನಲಾಗಿದೆ.

ಮಗು ಪತ್ತೆಯಾದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಆಶಾ ಜ್ಯೋತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ನಂತರ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿತರ ಮೃತದೇಹಗಳು ಗಂಗಾ ನದಿಯಲ್ಲಿ ತೇಲಿ ಬಂದು ಉತ್ತರ ಪ್ರದೇಶ ಮತ್ತು ಬಿಹಾರದ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಗಂಗಾ ನದಿಯಲ್ಲಿ ಶವಗಳು ತೇಲಿದ ಪ್ರಕರಣ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿತ್ತು.

ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಹಸಿರು ಬಣ್ಣಕ್ಕೆ ತಿರುಗಿದ ಗಂಗಾ ನದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights