ರಾಜ್ಯ BJPಯಲ್ಲಿ ನಾಯಕತ್ವ ಬದಲಾವಣೆ ಫಿಕ್ಸ್‌!; ಬಿಎಸ್‌ವೈ ಮುಂದಿವೆ ಎರಡು ಆಯ್ಕೆಗಳು!?

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ವಿಚಾರ ತಣ್ಣಗಾಗಿರುವಂತೆ ಕಾಣುತ್ತಿದ್ದರೂ, ತೆರೆಮರೆಯಲ್ಲಿ ನಾಯಕತ್ವ ಬದಲಾವಣೆಯ ಕಸರತ್ತು ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಅಲ್ಲದೆ, ಸಿಎಂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಆಂಧ್ರ ಪ್ರದೇಶಕ್ಕೆ ರಾಜ್ಯಪಾಲರನ್ನಾಗಿ ನೇಮಿಸಲಾಗುತ್ತದೆ ಮತ್ತು ಅವರ ಪುತ್ರ, ಸಂಸದ ಬಿವೈ ರಾಘವೇಂದ್ರ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಬಿಜೆಪಿ ಮೂಲಗಳೇ ಹೇಳುವ ಪ್ರಕಾರ ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆ ಪ್ರಕ್ರಿಯೆ ಇಷ್ಟರಲ್ಲಿಯೇ ಮುಗಿಯಲಿತ್ತು. ಆದರೆ ಕೋವಿಡ್‌ ಹೆಚ್ಚಳವಾದ ಕಾರಣಕ್ಕೆ ಅದು ತಡವಾಯಿತು. ಕೊರೊನಾ ಸಂದರ್ಭದಲ್ಲಿ ನಾಯಕತ್ವ ಬದಲಾದರೆ ರಾಜ್ಯದ ಜನರಿಗೆ ಕೆಟ್ಟ ಸಂದೇಶ ರವಾನೆ ಆಗಲಿದೆ ಎಂಬ ಭಯವೂ ಬಿಜೆಪಿಯಲ್ಲಿದ್ದು, ಅದಕ್ಕಾಗಿ ಕೋವಿಡ್‌ ಅಲೆ ಕಡಿಯಾಗಲಿ ಎಂದು ಕಾಯುತ್ತಿರುವ ಹಾಗಿದೆ.

ಮೂಲಗಳ ಪ್ರಕಾರ ಅತೀ ಶೀಘ್ರದಲ್ಲೇ ರಾಜ್ಯ ಬಿಜೆಪಿ ನಾಯಕತ್ವಕ್ಕೆ ಹೊಸ ಮುಖ ಬರುವುದು ಗ್ಯಾರಂಟಿ ಎನ್ನಲಾಗಿದ್ದು. ಇದನ್ನು ಸಚಿವ ಹಾಗೂ ರಾಜ್ಯ ಬಿಜೆಪಿ ಭಿನ್ನರ ಬಣದ ಮುಖಂಡ ಸಿ.ಪಿ.ಯೋಗೇಶ್ವರ್‌ ಅವರ ಹೇಳಿಕೆಗಳು ಸೂಚಿಸುತ್ತಿವೆ. ಆದರೆ, ಸದ್ಯಕ್ಕೆ ಆ ರಹಸ್ಯ ನಾಯಕ ಯಾರು ಎನ್ನುವುದಷ್ಟೇ ಈಗ ಕುತೂಹಲ ಹುಟ್ಟಿಸಿದೆ.

ಈ ನಡುವೆಯೇ ಯೋಗೇಶ್ವರ್‌ ದೆಹಲಿ ಪ್ರವಾಸ ಕೈಗೊಂಡಿದ್ದರು. ರಾಜಕೀಯದ ಯಾವುದೇ ಉದ್ದೇಶ ಇಲ್ಲ, ಖಾಸಗಿ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆಂದು ಸಚಿವ ಸಿ.ಪಿ. ಯೋಗೇಶ್ವರ್‌ ಮಾಧ್ಯಮದ ಮುಂದೆ ಮಾತಾನಾಡುತ್ತಾ ತಮ್ಮ ದೆಹಲಿ ಭೇಟಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಮುಂದಿನ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಿ: ಪಕ್ಷದ ಮುಖಂಡರಿಗೆ ಯಡಿಯೂರಪ್ಪ ಕರೆ!

ಅವರ ಮಾತನ್ನು ಅಷ್ಟು ಸುಲಭವಾಗಿ ನಂಬುವುದಕ್ಕೆ ಆಗುತ್ತಾ? ರಾಜ್ಯ ಉಸ್ತುವಾಗಿ ಅರುಣ್‌ ಸಿಂಗ್‌ ರಾಜ್ಯ ಭೇಟಿಯ ದಿನವೂ ಅವರು ತಮ್ಮ ದೆಹಲಿ ಪ್ರವಾಸದ ಬಗ್ಗೆಯೂ ಹೀಗೆಯೇ ಹೇಳಿ ನೀಡಿದ್ದರು. ಅವತ್ತು ಅವರು ನೇರವಾಗಿ ದೆಹಲಿಯಿಂದ ಬೆಂಗಳೂರಿಗೆ ಬಂದ ವಿಮಾನದಲ್ಲಿಯೇ ಅವರು ಬಂದಿದ್ದರೂ, ತಾವು ಹೈದ್ರಾಬಾದ್‌ ನಿಂದ ಬಂದಿದ್ದಾಗಿ ಹೇಳಿದ್ದರು.

ಅಷ್ಟು ಮಾತ್ರವಲ್ಲ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೂಡ ದೆಹಲಿಯಲ್ಲಿದ್ದಾರೆ. ಅವರಿಬ್ಬರ ದಿಢೀರ್‌ ದೆಹಲಿ ಭೇಟಿಯ ಉದ್ದೇಶ ನಾಯಕತ್ವದ ಬದಲಾವಣೆಯ ವಿಚಾರವನ್ನು ಹೈಕಮಾಂಡ್‌ ಮುಂದೆ ಮತ್ತಷ್ಟು ಗಟ್ಟಿಯಾಗಿ ಹೇಳುವುದೇ ಆಗಿದೆ. ಆದರೆ ಅದನ್ನು ಈಗ ಮುಚ್ಚಿಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

ಹೈಕಮಾಂಡ್‌ ಕೂಡ ನಾಯಕತ್ವದ ಬದಲಾವಣೆಗೆ ಒಲವು ತೋರಿರುವ ಕಾರಣಕ್ಕಾಗಿಯೇ ರಾಜ್ಯ ಬಿಜೆಪಿಯೊಳಗೆ ಇವೆಲ್ಲ ವಿದ್ಯಮಾನಗಳು ಘಟಿಸುತ್ತಿವೆ. ಈ ಮಧ್ಯೆಯೇ ಸಿಎಂ ಪುತ್ರ ಸಂಸದ ರಾಘವೇಂದ್ರ ಹಾಗೂ ವಿಜಯೇಂದ್ರ ಕೂಡ ಕೆಲವು ದಿನಗಳ ಹಿಂದಷ್ಟೇ ರಹಸ್ಯವಾಗಿ ದೆಹಲಿಗೆ ಹೋಗಿ ಬಂದಿದ್ದಾರೆ. ಹೈಕಮಾಂಡ್‌ ಸೂಚನೆಯ ಮೇರೆಗೆ ಅವರು ದೆಹಲಿಗೆ ಹೋಗಿ ಬಂದಿದ್ದಾರೆ ಎಂದು ಬಿಜೆಪಿಯ ಮೂಲಗಳೇ ಹೇಳಿವೆ.

ಈ ವೇಳೆ, ಸಂಸದ ಬಿವೈ ರಾಘವೇಂದ್ರ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ್ದು, ಸಿಎಂ ಯಡಿಯೂರಪ್ಪ ಅವರು ಗೌರವಯುವತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಬೇಕು ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಿಎಸ್‌ವೈ ಸಿಎಂ ಖುರ್ಚಿ ಖಾಲಿ ಮಾಡಬಹುದು ಎಂದು ಹೇಳಲಾಗಿದೆ. ಅಲ್ಲದೆ, ಬಿಎಸ್‌ವೈ ಅವರನ್ನು ಆಂಧ್ರದ ರಾಜ್ಯಪಾಲ ಹುದ್ದೆಗೆ ನೇಮಿಸುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಅರಸೀಕೆರೆಯಲ್ಲಿ ಆಪರೇಷನ್‌ ಕಮಲ; 10 ಲಕ್ಷ ರೂ. ಮುಂದಿಟ್ಟು ಪತ್ರಿಕಾಗೋಷ್ಟಿ ನಡೆಸಿದ ರೇವಣ್ಣ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.