ರಾತ್ರೋರಾತ್ರಿ ಕಳುವಾಯ್ತು ರಸ್ತೆ; ಗ್ರಾಮಸ್ಥರಿಂದ ಪೊಲೀಸರಿಗೆ ದೂರು ದಾಖಲು!
ರಾತ್ರೋರಾತ್ರಿ ಒಂದು ಕಿ.ಮೀ ಉದ್ದದ ರಸ್ತೆ ಕಳುವಾಗಿದೆ ಎಂದು ವಿಚಿತ್ರವಾದ ದೂರು ದಾಖಲಾಗಿರುವ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಸಿಧಿ ಜಿಲ್ಲೆಯ ಮಂಜೋಲಿ ಜನ್ ಪಾಡ್ ಪಂಚಾಯತ್ ವ್ಯಾಪ್ತಿಯ ಮೆಂಡ್ರಾ ಗ್ರಾಮದ ಡೆಪ್ಯುಟಿ ಸರಪಂಚ್ ಮತ್ತು ಸ್ಥಳೀಯರು ರಸ್ತೆ ಕಳವಾಗಿರುವ ಬಗ್ಗೆ ಮಂಜ್ಹೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಎರಡು ದಿನಗಳ ಹಿಂದೆ ಇದ್ದ ರಸ್ತೆ, ರಾತ್ರೋರಾತ್ರಿ ಕಳುವಾಗಿದೆ. ನಿನ್ನೆ ಕೂಡ ರಸ್ತೆ ಅಸ್ತಿತ್ವದಲ್ಲಿತ್ತು. ಆದರೆ, ಈಗ ಅದು ಕಾಣೆಯಾಗಿದೆ. ಯಾರೋ ಅದನ್ನು ಕದ್ದಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ವಿಷಯವೇನೆಂದರೆ, ಗ್ರಾಮದ ರಸ್ತೆಯನ್ನು ಕಚ್ಚಾರಸ್ತೆಯಿಂದ ಪಕ್ಕಾ ರಸ್ತೆ ಮಾಡಲು 2017ರಲ್ಲಿ 10 ಲಕ್ಷ ರೂಪಾಯಿ ಮಂಜೂರು ಮಾಡಲಾಗಿತ್ತು. ಈ ರಸ್ತೆಯನ್ನು ಪಕ್ಕಾ ರಸ್ತೆ ಮಾಡಲಾಗಿದೆ ಎಂದು ಸಂಪೂರ್ಣ ದಾಖಲಾತಿಗಳನ್ನೂ ನೀಡಲಾಗಿತ್ತು. ದಾಖಲೆಗಳಲ್ಲಿ ಈ ರಸ್ತೆ ಈಗ ಉತ್ತಮವಾದ ರೀತಿಯಲ್ಲಿ ಇದೆ. ರಸ್ತೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ದಾಖಲೆಗಳನ್ನು ನೀಡಲಾಗಿತ್ತು.
ಆದರೆ, ವಾಸ್ತವದಲ್ಲಿ ರಸ್ತೆ ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ನಿನ್ನೆ ರಾತ್ರಿ ಸುರಿದಿರುವ ಮಳೆಗೆ ರಸ್ತೆ ಕಿತ್ತು ಹಾಳಾಗಿದೆ. ಮಾನ್ಸೂನ್ ನಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲದ್ದಂತಾಗಿದೆ. ಇದು ಗ್ರಾಮದ ಜನರನ್ನು ಸಿಟ್ಟಿಗೇಳಿಸಿದ್ದು, ಜನರು ರಸ್ತೆ ಕಳುವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ, ರಸ್ತೆಯ ವಿಚಾರ ಜನಪದ್ ಪಂಚಾಯತ್ ಕಚೇರಿಗೂ ತಲುಪಿದ್ದು , ಜನಪದ್ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಕಣ್ಮರೆಯಾದ ರಸ್ತೆಯ ದೂರಿನ ಬಗ್ಗೆ ವರದಿಯನ್ನು ಸ್ವೀಕರಿಸಲಾಗಿದೆ. ರಸ್ತೆ ಕಾಮಗಾರಿ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಕಾಗದಪತ್ರಗಳ ಮೇಲೆ ಗ್ರಾಮದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ವಾಸ್ತವದಲ್ಲಿ ಅಂತಹ ಯಾವುದೇ ರಸ್ತೆಯನ್ನು ನಿರ್ಮಾಣ ಮಾಡಿಲ್ಲ. ಬದಲಾಗಿ, ಯೋಜನೆಗೆ ಮೀಸಲಾದ ಹಣವನ್ನು ಸರ್ಕಾರಿ ಸಿಬ್ಬಂದ ಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಂಕಷ್ಟ ಹೇಳಿಕೊಳ್ಳಲು ಹೋದ ಜನ; ಏನಾದ್ರು ಮಾಡಿಕೊಂಡು ಸತ್ತೋಗಿ ಎಂದು ದರ್ಪ ಮೆರೆದ ಸಚಿವ!