ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು!
ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಸಮಾಜವಾದಿ ಪಕ್ಷ ತೀವ್ರ ಮುಖಭಂಗಕ್ಕೀಡಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 75 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿಯು ಕೇವಲ 6 ಜಿಲ್ಲೆಗಳಲ್ಲಿ ಜಯ ಗಳಿಸಿದೆ. ರಾಷ್ಟ್ರೀಯ ಲೋಕ ದಳ, ಜನಸತ್ತಾದಳ, ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದೊಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. 21 ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮತ್ತು ಒಂದು ಜಿಲ್ಲೆಯಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿನ್ನೆಯ ಫಲಿತಾಂಶ ಮುಂದಿನವರ್ಷದ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶ ಜಿಲ್ಲಾ ಪಂಚಾಯತ್ ಚುನಾವಣೆಯ ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಈ ಫಲಿತಾಂಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಜನರು ನೀಡಿದ ಉಡುಗೊರೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ 21 ಸ್ಥಾನಗಳಲ್ಲಿ ಮತ್ತು ಸಮಾಜವಾದಿ ಪಕ್ಷ 1 ಸ್ಥಾನದಲ್ಲಿ ಅವಿರೋಧವಾಗಿ ಗೆಲುವು ಸಾಧಿಸಿವೆ. ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಬಿಎಸ್‌ಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಾಗವಹಿಸಿರಲಿಲ್ಲ.
ಮತ ಎಣಿಕೆ ವೇಳೆ ಬಿಜೆಪಿ ಮುಂಚೂಣಿಯಲ್ಲಿರುವ ಟ್ರೆಂಡ್ ತಿಳಿಯುತ್ತಲೇ ಸಮಾಜವಾದಿ ಪಾರ್ಟಿ ಕಾರ್ಯಕರ್ತರು, ”ಬಿಜೆಪಿಯು ಚುನಾವಣೆ ಅಕ್ರಮ ನಡೆಸಿದೆ,” ಎಂದು ಆರೋಪಿಸಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದರು. ಆ ಪೈಕಿ ಪ್ರಯಾಗ್‌ರಾಜ್‌ನಲ್ಲಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.