ನಾಳೆಯಿಂದ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ : ಅಧಿಕ ಸಂಖ್ಯೆಯಲ್ಲಿ ಬಸ್ ಸಂಚಾರ!

ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಹೇರಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು ನಾಳೆಯಿಂದ ಕರುನಾಡು ಸಹಜ ಸ್ಥಿತಿಗೆ ಮರಳಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಹಲವಾರು ಕ್ಷೇತ್ರಗಳಿಗೆ ಹಾಕಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇಕಡಾ 100ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಮಾಲ್‌ಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ದೇವಾಲಯಗಳನ್ನು ತೆರೆಯುವ ಬಗ್ಗೆ ಕೆಲವು ನಿರ್ಬಂಧಗಳೊಂದಿಗೆ ಅವಕಾಶ ನೀಡಲಾಗಿದೆ. ಭಕ್ತರಿಗೆ ದೇವಾಲಯ ಪ್ರವೇಶ, ದೇವರ ದರ್ಶನ ಮತ್ತು ಆರತಿ ಸೇವೆಗಷ್ಟೇ ಅವಕಾಶ ಮಾಡಿಕೊಡಲಾಗಿದೆ. ಬಾರ್​ಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

ಈಜುಕೊಳದಲ್ಲಿ ಕ್ರೀಡಾಪಟುಗಳು ಅಭ್ಯಾಸಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ, ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ ಕೊಡಲಾಗಿದೆ. ಮದುವೆ, ಕೌಟುಂಬಿಕ ಸಮಾರಂಭಗಳಲ್ಲಿ 100 ಜನರು ಭಾಗಿಯಾಗಬಹುದು. ಅಂತ್ಯಕ್ರಿಯೆಯಲ್ಲಿ ಕೇವಲ 20 ಜನ ಭಾಗಿಯಾಗಲು ಅವಕಾಶ ಕೊಡಲಾಗಿದೆ. ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. KSRTC, BMTC ಬಸ್​ಗಳಲ್ಲಿ ಶೇಕಡಾ 100ರಷ್ಟು ಪ್ರಯಾಣಿಕರಿಗೆ ಅವಕಾಶ ಕೊಡಲಾಗಿದೆ. ಮೆಟ್ರೋ ರೈಲುಗಳಲ್ಲಿ ಕೂಡ ಶೇಕಡಾ 100ರಷ್ಟು ಜನರಿಗೆ ಅವಕಾಶ ನೀಡಲಾಗಿದೆ.

ಕೆಎಸ್​ಆರ್​ಟಿಸಿ ಬಸ್ ಸಂಚಾರ ವಿಭಾಗದ ವ್ಯವಸ್ಥಾಪಕ ಪ್ರಭಾಕರ್​ ರೆಡ್ಡಿ ಮಾಹಿತಿ ನೀಡಿದ್ದು, ನಾಳೆಯಿಂದ ಶೇ.100ರಷ್ಟು ಪ್ರಯಾಣಿಕರಿಗೆ ಸರ್ಕಾರ ಅನುಮತಿ ನೀಡಿದೆ. ಸರ್ಕಾರ ಆದೇಶದನ್ವಯ ಶೇಕಡಾ 100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು. ಆದರೆ, ಬಸ್​​ನಲ್ಲಿ ನಿಂತು ಪ್ರಯಾಣ ಮಾಡಲು ಅವಕಾಶವಿಲ್ಲ. ಆಸನದ ಸಾಮರ್ಥ್ಯದಲ್ಲಿ ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು. ನಾಳೆಯಿಂದ 3,500 ರಿಂದ 4,000 ಬಸ್​ಗಳು ಸಂಚರಿಸಲಿವೆ ಎಂದರು.

ಅನ್‌ಲಾಕ್ 3.Oನಲ್ಲಿ ನಮ್ಮ ಮೆಟ್ರೋಗೆ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಬಿಎಂಆರ್​ಸಿಎಲ್​ನಿಂದ ನಮ್ಮ ಮೆಟ್ರೋ ಅವಧಿ ವಿಸ್ತರಣೆ ಮಾಡಲಾಗುತ್ತಿದೆ. ಬೆಳಗ್ಗೆ 7 ರಿಂದ ರಾತ್ರಿ 8ರವರಿಗೆ ಮೆಟ್ರೋ ಸಂಚಾರ ಇರಲಿದೆ. ಹಸಿರು ಹಾಗೂ ನೇರಳೆ ಎರಡು ಮಾರ್ಗದಲ್ಲಿ ಮೆಟ್ರೋ ರಾತ್ರಿ 8ರವರೆಗೆ ಸೇವೆ ಲಭ್ಯವಿರಲಿದೆ. ಜನದಟ್ಟಣೆಯ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೊಂದು, ಜನದಟ್ಟಣೆ ಇಲ್ಲದ ವೇಳೆ 15 ನಿಮಿಷಕ್ಕೊಮ್ಮೆ ಮೆಟ್ರೋ ಓಡಿಸಲಾಗುತ್ತದೆ ಅಂತಾ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights