‘ಅಂಬಾರಿ ಹೋರಲು ಯಾವ ಆನೆ ಸೂಕ್ತ ಅಂತ ಗೊತ್ತಿದೆ’ ಸಿಎಂ ಪುತ್ರನಿಗೆ ಟಾಂಗ್ ಕೊಟ್ಟ ಸಿಪಿ ಯೋಗೇಶ್ವರ್!
ಅಪ್ಪ ಅಂಬಾರಿ ಹೊತ್ತಿದ್ದ ಅಂತ ಮರಿ ಆನೆಗೆ ಅಂಬಾರಿ ಕೊಡಲು ಆಗುತ್ತಾ? ಅಂಬಾರಿ ಹೋರಲು ಸಾಮಾರ್ಥ್ಯ ಇರಬೇಕು. ಅನುಭವ ಇರಬೇಕು ಎಂದು ಸಚಿವ ಸಿಪಿ ಯೋಗೇಶ್ವರ್ ಸಿಎಂ ಪುತ್ರ ವಿಜಯೇಂದ್ರನಿಗೆ ಟಾಂಗ್ ಕೊಟ್ಟಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಮತ್ತೆ ಸಿಎಂ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿರುವ ನಾಯಕತ್ವದ ವಿಷಯವನ್ನು ಬಗೆಹರಿಸಲು ಬಿಜೆಪಿ ವರಿಷ್ಠರು ಸಹಾಯ ಮಾಡುವ ವಿಶ್ವಾಸವಿದೆ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಅಂಬಾರಿ ಹೋರಲು ಯಾವ ಆನೆ ಸೂಕ್ತ ಅಂತ ಗೊತ್ತಿದೆ. ಜನರು ದೇವಸ್ಥಾನಕ್ಕೆ ಹೋದರೆ ರಾಜ ಗೋಪುರಕ್ಕೆ ಕೈಮುಗಿದು ಹೋಗುತ್ತಾರೆ. ಆದರೆ ಕೆಳಗಿರುವ ಫೌಂಡೇಶ್ ಚಪ್ಪಡಿ ಕಲ್ಲುಗಳಿಗೆ ಚಪ್ಪಲಿ ಬಿಟ್ಟು ಹೋಗುತ್ತಾರೆ. ಅದೇ ರೀತಿ ನಮ್ಮ ಸ್ಥಿತಿ ಆಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ಬರಲು ನಾವು ಶ್ರಮಿಸಿದ್ದೇವೆ. ಆದರೆ ನಮ್ಮ ಶ್ರಮ ಯಾರಿಗೂ ಕಾಣಿಸುತ್ತಿಲ್ಲ ಎಂದು ಬೇಸರಗೊಂಡರು.
ಸಿಎಂ ಯಡಿಯೂರಪ್ಪ ವಿರುದ್ಧ ತಮ್ಮದೇ ಪಕ್ಷದ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯ ಬಿಜೆಪಿ ಪಕ್ಷ ಮುಜುಗರಕ್ಕೆ ಒಳಗಾಗಿದೆ. ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಮಾತನಾಡೋದು ಸರ್ವೇ ಸಾಮಾನ್ಯ. ಆದರೆ ಸರ್ಕಾರದಲ್ಲಿ ಸಚಿವರಾಗಿರುವ ಯೋಗೇಶ್ವರ್ ರವರೇ ಸರ್ಕಾರ ಹಾಗೂ ಸಿಎಂ ವಿರುದ್ಧ ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಡ್ತಿರೋದು ನಿಜಕ್ಕೂ ಬಿಜೆಪಿ ಪಕ್ಷಕ್ಕೆ ಇದೊಂದು ದೊಡ್ಡ ಡ್ಯಾಮೇಜ್ ಎಂದೇ ಹೇಳಬಹುದು.

