ಕೆಆರ್ ಪೇಟೆ: ನಾಲೆ ಆಧುನೀಕರಣ ಹೆಸರಲ್ಲಿ 500 ಕೋಟಿ ಲೂಟಿ?; ಲೋಕಯುಕ್ತದಿಂದ ಪರಿಶೀಲನೆ!
ಹಾಸನ ಹಾಗೂ ಮಂಡ್ಯ ಜಿಲ್ಲೆಯ ಬಹುಭಾಗಕ್ಕೆ ನೀರುಣಿಸುವ ಹೇಮಾವತಿ ಎಡದಂಡೆ ನಾಲೆಯ ಸರಪಳಿಯಲ್ಲಿರುವ, ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗಿರುವ 72.860 ರಿಂದ 214.300 ಕಿ.ಮೀ ವರೆಗಿನ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಬಹುಕೋಟಿಯ ಹಗರಣ ನಡೆದಿದೆ ಎಂದು ರೈತರು ಆರೋಪಿಸಿದ್ದು, ಲೋಕಾಯುಕ್ತ ಮಂಗಳವಾರದಿಂದ ನಾಲ್ಕು ದಿನಗಳ ಕಾಲ ಕಾಲುವೆಯ ಉದ್ದಕ್ಕೂ ಸಂಚರಿಸಿ ಪರಿಶೀಲನೆ ನಡೆಸುತ್ತಿದೆ.
ನಾಲೆ ಆಧುನೀಕರಣಕ್ಕಾಗಿ ನೀಡಲಾಗಿದ್ದ 883,14,88,878.00 ಕೋಟಿ ರೂ ಮೌಲ್ಯದ ಟೆಂಡರ್‌ನಲ್ಲಿ ಸುಮಾರು 500 ಕೋಟಿ ರೂಗಳಷ್ಟು ಧೋಖಾ ನಡೆದಿದೆ ಎಂದು ರೈತ ಮುಖಂಡ ನಾಗೇಗೌಡ ಎಂಬುವವರು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರನ್ನು ಆಧರಿಸಿ ಕಾಲುವೆಯ ಉದ್ದಕ್ಕೂ ಲೋಕಯುಕ್ತದ ತಾಂತ್ರಿಕ ವಿಭಾಗ ಪರಿಶೀಲನೆ ನಡೆಸುತ್ತಿದೆ. ಲೋಕಾಯುಕ್ತದ ಚೀಫ್ ಎಂಜಿನಿಯರ್ ಪ್ರಸಾದ್ ಮತ್ತು ನಿರಂಜನ್ ನೇತೃತ್ವದ ತಂಡವು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅರಂಭವಾಗುವ ನಾಲೆಯ 72.860 ಕಿ.ಮೀನಿಂದ ಪರಿಶೀಲನೆ ಅರಂಭಿಸಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹಾದುಹೋಗಿರುವ ನಾಲೆಯ ಮೇಲೆ ಸಂಚರಿಸಿ 214.300 ಕಿ.ಮೀ ಪರಿಶೀಲನೆಯನ್ನು ನಡೆಸಲಾಗುತ್ತಿದೆ.
ಕಾಲುವೆ ಪುನಶ್ಚೇತನಕ್ಕಾಗಿ ನಡೆದ ಕಾಮಗಾರಿಯಲ್ಲಿ ಗ್ರೆವೆಲ್ ಮಣ್ಣು ಬಳಕೆ, ಮರಳು, ಕಾಲುವೆಯಲ್ಲಿ ಕೆಲವು ಬಂಡೆಗಳ ಸಿಡಿತ, ಕಾಲುವೆ ಬದಿಯಲ್ಲಿ ಹುಲ್ಲು ಹಾಸು, ಹೆಕ್ಟೋ ಮೀಟರ್ ಕಲ್ಲುಗಳು, ಗಡಿ ಕಲ್ಲುಗಳೂ ಸೇರಿದಂತೆ ಕಳಪೆ ಕಾಮಗಾರಿ ಮಾಡಿ 500 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಲೂಟಿ ನಡೆದಿರುವುದಕ್ಕೆ ಸಾಕ್ಷಾ-ಪುರಾವೆಗಳನ್ನು ಲೋಕಾಯುಕ್ತಕ್ಕೆ ನೀಡಿರುವುದಾಗಿ ರೈತ ಮುಖಂಡ ನಾಗೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 838 ಕೋಟಿ ಮೊತ್ತದ ಭಾರೀ ಹಗರಣ: ಸ್ಥಳೀಯ ಶಾಸಕ ಭಾಗಿ?
ಕಾಲುವೆಗಳ ಲೈನಿಂಗ್‌ಗಳು, ರ್ಯಾಂಪ್‌ಗಳು, ಸೋಪನಂ ಕಟ್ಟೆಗಳನ್ನು ಕಳಪೆ ಕಾಮಗಾರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಇವುಗಳ ನಿರ್ಮಾಣಕ್ಕಾಗಿ ದುಪ್ಪಟ್ಟು ಬಿಲ್ ಕ್ಲೈಮ್ ಮಾಡಿಕೊಳ್ಳಲಾಗಿದೆ. ನಾಲೆಯಿಂದ 100 ಕಿ.ಮೀಗೂ ದೂರದಿಂದ ಗ್ರಾವೆಲ್ ಮಣ್ಣನ್ನು ತರಲಾಗಿದೆ, ಟಿ. ನರಸೀಪುರದಿಂದ ಮರಳನ್ನು ತರಲಾಗಿದೆ ಎಂದು ಬಿಲ್ ಕ್ಲೈಮ್ ಮಾಡಲಾಗಿದೆ. ಅದರೆ, ಕಾಲುವೆಯ ಉದ್ದಕ್ಕೂ ಎಲ್ಲಿಯೂ ಗ್ರಾವೆಲ್ ಮಣ್ಣನ್ನು ಬಳಸಿಲ್ಲ, ಅಲ್ಲದೆ, ಕಾಮಗಾರಿಗೆ ಮರಳಿನ ಬದಲಾಗಿ ಎಂ-ಸ್ಯಾಂಡ್ ಮಣ್ಣನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಟರ್ಫಿಂಗ್ ಹೆಸರಿನಲ್ಲಿ 4.34 ಕೋಟಿ ರೂ, ಚರಂಡಿ (ಡ್ರೈನ್) ಹೆಸರಿನಲ್ಲಿ 1.39 ಕೋಟಿ ರೂ, ಗಡಿ ಕಲ್ಲುಗಳು – 9.71 ಲಕ್ಷ ರೂ, ಬೆಂಚ್ ಮಾರ್ಕ್ ಕಲ್ಲು – 48.91 ಲಕ್ಷ ರೂ., ಕಿ.ಮೀ. ಕಲ್ಲುಗಳು – 2.53 ಲಕ್ಷ ರೂ. ಹೆಕ್ಟೋಮೀಟರ್ ಕಲ್ಲುಗಳು – 15.29 ಲಕ್ಷ ರೂ., 10.50 ಕಿ.ಮೀ ವ್ಯಾಟ್ ಸಾಮರ್ಥ್ಯದ 3 ಜನರೇಟರ್‌ಗಳು – 20.40 ಲಕ್ಷ ರೂ., ಗಾರ್ಡ್ ಸ್ಟೋನ್ಗಳ (ರಕ್ಷಣಾ ಕಲ್ಲುಗಳು) ಹೆಸರಿನಲ್ಲಿ 4.79 ಕೋಟಿ ರೂ ಸೇರಿದಂತೆ ಒಟ್ಟು 11.65 ಕೋಟಿ ರೂ. ಸುಳ್ಳು ಲೆಕ್ಕ ತೋರಿಸಿ ಹಗಲು ದರೋಡೆ ಮಾಡಲಾಗಿದೆ.
ಅಂದಾಜು 883 ಕೋಟಿ ರೂ ಮೊತ್ತದ ಟೆಂಡರ್‌ನಲ್ಲಿ ಈಗಾಗಲೇ 1200 ಕೋಟಿಗಳಿಗೂ ಅಧಿಕ ಹಣವನ್ನು ಬಿಲ್ ಮಾಡಿಕೊಳ್ಳಲಾಗಿದೆ ಎಂದು ರೈತರ ಮುಖಂಡರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಇಲಾಖೆಯ ತಂಡ ಜುಲೈ 13ರಿಂದ ನಾಲ್ಕು ದಿನಗಳ ಕಾಲ ನಾಲೆಯ ಉದ್ದಕ್ಕೂ ಸಂಚರಿಸಿ ಪರಿಶೀಲನೆ ನಡೆಸುತ್ತಿದೆ. ಕಾಲುವೆಗಳ ಲೈನಿಂಗ್‌ಗಳು, ರ್ಯಾಂಪ್‌ಗಳು, ಸೋಪನಂ ಕಟ್ಟೆ, ಸೇತುವೆಗಳಲ್ಲಿ ಲೋಕಗಳು ಕಂಡುಬಂದಿದ್ದು, ಪರಿಶೀಲನಾ ತಂಡವು ಅವುಗಳ ಸ್ಯಾಂಪಲ್‌ಗಳನ್ನು ತೆಗೆದುಕೊಂಡಿದ್ದು, ಲ್ಯಾಬ್ ಟೆಸ್ಟ್‌ಗೆ ಕಳಿಸಲಿದೆ.
ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಲೋಕಯುಕ್ತದ ನಮ್ಮ ತಂಡ ಪರಿಶೀಲನೆಗೆ ಬಂದಿದ್ದೇವೆ. ನಾನು ನಾಲೆಯ ಉದ್ದಕ್ಕೂ ಕಾಮಗಾರಿಯ ಎಲ್ಲವನ್ನೂ ಗಮನಿಸುತ್ತಿದ್ದೇನೆ. ಈ ವೇಳೆ ಕಂಡುಬಂದಿರುವ ಎಲ್ಲಾ ರೀತಿಯ ಲೋಪಗಳನ್ನು ದಾಖಲಿಸಿಕೊಂಡಿದ್ದೇವೆ. ಎಲ್ಲವನ್ನೂ ಪರಿಶೀಲನಾ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸುತ್ತೇವೆ – ಪ್ರಸಾದ್, ಚೀಫ್ ಎಂಜಿನಿಯರ್, ಲೋಕಯುಕ್ತ.
ಪರಿಶೀಲನೆಯ ವೇಳೆ, ತಂಡದ ಮುಖ್ಯಸ್ಥ, ಚೀಫ್ ಎಂಜಿನಿಯರ್ ಪ್ರಸಾದ್, ನಿರಂಜನ್, ಚನ್ನರಾಯಪಟ್ಟಣ ಹೇಮಾವತಿ ನಾಲಾ ವಿಭಾಗದ ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಕೆಆರ್‌ಪೇಟೆ ಎಚ್‌ಎಲ್‌ಬಿಸಿ ವಿಭಾಗದ ಶ್ರೀನಿವಾಸ್, ಗುರುಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
ದೂರುದಾರರಾದ ರೈತ ಹೋರಾಟಗಾರ ನಾಗೇಗೌಡ, ಕೆಆರ್‌ಪೇಟೆ ರೈತ ನಾಯಕ ರಾಜೇಗೌಡ, ಕರೋಟಿ ತಮ್ಮಣ್ಣ, ಮಾಕವಳ್ಳಿ ರವಿ ಸೇರಿದಂತೆ ಹಲವರು ಸ್ಥಳದಲ್ಲಿದ್ದರು.
ಇದನ್ನೂ ಓದಿ: ಉಕ್ಕು ಕಂಪನಿಗಳಿಗೆ 7,537 ಎಕರೆ ಜಮೀನು; ಭೂಬೆಲೆ ನಿಗದಿಯಲ್ಲಿ 4 ಸಾವಿರ ಕೋಟಿ ಹಗರಣ; ತನಿಖೆ ನಡೆಸದ ಸರ್ಕಾರ