ಗಾಂಧೀಜಿಯ ಹೋರಾಟವನ್ನು ಹತ್ತಿಕ್ಕಲು ಬ್ರೀಟಿಷರು ಬಳಸುತ್ತಿದ್ದ ‘ದೇಶದ್ರೋಹ ಕಾನೂನು’ ಇಂದಿಗೂ ಅಗತ್ಯವೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ!

ದೇಶದ್ರೋಹ ಕಾನೂನನ್ನು ‘ವಸಾಹತುಶಾಹಿ’ ಕಾನೂನಾಗಿದ್ದು, ಬ್ರಿಟಿಷರ ವಿರುದ್ದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ಮಹಾತ್ಮ ಗಾಂಧಿಯವರನ್ನು ಮೌನಗೊಳಿಸಲು ಬ್ರಿಟಿಷರು ಬಳಸುತ್ತಿದ್ದ ಕಾನೂನು. ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದ ನಂತರವೂ ಈ ಕಾನೂನಿನ ಅಗತ್ಯವಿದೆಯೇ ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ದೇಶದ್ರೋಹವೆಂದು ಅಪರಾಧೀಕರಿಸುವ ಐಪಿಸಿ ಸೆಕ್ಷನ್‌ 124(ಎ)ಅನ್ನು ರದ್ದುಗೊಳಿಸಿವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, “ಗಾಂಧೀಜಿಯ ಹೋರಾಟವನ್ನು ಹತ್ತಿಕ್ಕಲು ಬ್ರೀಟಿಷರು ಇದೇ ಕಾನೂನನ್ನು ಬಳಸುತ್ತಿದ್ದರು. ಬ್ರಿಟಿಷ್ ವಶಾಹತುಶಾಹಿಗಳ ಈ ದೇಶದ್ರೋಹದ ಕಾನೂನು ಅಗತ್ಯವಿದೆಯೇ?” ಎಂದು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರನ್ನು ಪ್ರಶ್ನಿಸಿದ್ದಾರೆ.

ಈ ಕಾನೂನು ದುರ್ಬಳಕೆಯಾಗುತ್ತಿದೆ ಎಂಬುದು ನಮ್ಮ ಕಾಳಜಿಯಾಗಿದೆ. ಅಲ್ಲದೆ ಇದನ್ನು ಜಾರಿಗೊರಿಸುವವರು ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ. ‘ಇದುವರೆಗೂ ದಾಖಲಾದ ಪ್ರಕರಣಗಳಲ್ಲಿ ಕೆಲವೇ ಪ್ರಕರಣಗಳು ಮಾತ್ರ ಸಾಬೀತಾಗಿದ್ದು, ಅಪರಾಧ ದರ ತೀರಾ ಕಡಿಮೆ ಇರುವುದನ್ನು ಇತಿಹಾಸ ತೋರಿಸಿದೆ’ ಎಂದು ಎನ್‌ವಿ ರಮಣ ತಿಳಿಸಿದ್ದಾರೆ.

ಯಾವುದೇ ಗ್ರಾಮದಲ್ಲಿ ಯಾರಾದರೂ ಪ್ರಶ್ನಿಸಿದರೆ ಅವರನ್ನು ಬಂಧಿಸಿ ಪೊಲೀಸರು ಆತನ ಮೇಲೆ 124ಎ ಪ್ರಕರಣ ದಾಖಲಿಸಬಹುದಾಗಿದೆ. ಇದರಿಂದ ಜನ ಭಯಭೀತರಾಗಿದ್ದಾರೆ ಎಂದು ರಮಣ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆಂಧ್ರ ಸಿಎಂ ಜಗನ್‌ ವಿರುದ್ದ ಬಂಡಾಯ: ದೇಶದ್ರೋಹ ಪ್ರಕರಣದಲ್ಲಿ YSR ಕಾಂಗ್ರೆಸ್‌ ಸಂಸದನ ಬಂಧನ!

ನಾವು ಯಾವುದೇ ಸರ್ಕಾರವನ್ನು ದೂಷಿಸುತ್ತಿಲ್ಲ. ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಎಕ್ಷನ್ 66ಎ ಅನ್ನು ರದ್ದುಪಡಿಸಿ ಬಹಳ ದಿನಗಳಾದರೂ ಇನ್ನು ಬಳಕೆಯಲ್ಲಿದೆ. ಅದೇ ರೀತಿ ಈ ದೇಶದ್ರೋಹ ಕಾನೂನು ಸಹ ದುರ್ಬಳಕೆಯಾಗುತ್ತಿದೆ. ಇದರ ಸಿಂಧುತ್ವವನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಕಾಯ್ದೆ ಅತಿಯಾಗಿ ದುರ್ಬಳಕೆಯಾಗಿದೆ. ಬಡಗಿಯೊಬ್ಬನಿಗೆ ಕಾಡೋಂದನ್ನು ತೋರಿಸಿ ಯಾವುದಾದರೊಂದು ಮರವನ್ನು ಬಳಸಿಕೊ ಎಂದರೆ ಆತನ ಇಡೀ ಕಾಡನ್ನು ಕಡಿದ ರೀತಿ ಈ ಕಾನೂನು ಎಲ್ಲರ ವಿರುದ್ಧ ಪ್ರಯೋಗಿಸಲ್ಪಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಎರಡು ದಿನಗಳ ಹಿಂದೆ UAPA ಕಾಯ್ದೆಯ ಬಗ್ಗೆ ಸಹ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಭಯೋತ್ಪಾದನಾ ವಿರೋಧಿ ಕಾನೂನುಗಳ ದುರ್ಬಳಕೆ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಮೂರ್ತಿ ಜಸ್ಟಿಸ್‌ ಡಿ.ವೈ. ಚಂದ್ರಚೂಡ್‌ ಅಭಿಪ್ರಾಯ ಪಟ್ಟಿದ್ದರು. ಜುಲೈ 12ರಂದು ಇಂಡೋ-ಅಮೇರಿಕನ್‌ ನ್ಯಾಯಾಧೀಶರ ವರ್ಚುವಲ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, UAPA ಸೇರಿದಂತೆ ಭಯೋತ್ಪಾದನಾ ತಡೆ ಕಾನೂನುಗಳನ್ನು ಭಿನ್ನಮತಗಳ ದಮನಕ್ಕೆ ಮತ್ತು ಪ್ರಜೆಗಳ ಮೇಲಿನ ದೌರ್ಜನ್ಯಕ್ಕೆ ಪ್ರಯೋಗಿಸುವ ಟ್ರೆಂಡ್‌ ಇತ್ತೀಚೆಗೆ ಬೆಳೆಯುತ್ತಿರುವುದರ ಕುರಿತು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: JNU ದೇಶದ್ರೋಹ ಪ್ರಕರಣ: ಕನ್ಹಯ್ಯ ಕುಮಾರ್‌ಗೆ ಜಾರ್ಜ್‌ಶೀಟ್‌ ಪ್ರತಿ ನೀಡುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚನೆ!

ಮಾನವ ಹಕ್ಕುಗಳ ಹೋರಾಟಗಾರ 84 ವರ್ಷ ವಯಸ್ಸಿನ ಫಾದರ್ ಸ್ಟ್ಯಾನ್‌ ಸ್ವಾಮಿ ನಿಧನದ ನಂತರ ದೇಶದಲ್ಲಿ ಯುಎಪಿಎ ಕಾಯ್ದೆ ಕುರಿತು ತೀವ್ರ ಟೀಕೆಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಜಸ್ಟಿಸ್‌ ಚಂದ್ರಚೂಡ್‌ ಅವರ ಹೇಳಿಕೆ ಮಹತ್ವದ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗೆ ಖ್ಯಾತ ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಹಾಗೂ ಹಿಂಸಾಚಾರದ ಪ್ರಚೋದನೆ ಇಲ್ಲದಿರುವವರೆಗೂ ಪ್ರಭುತ್ವವನ್ನು ಮುಕ್ತವಾಗಿ ಟೀಕಿಸುವ ಪತ್ರಕರ್ತರ ಸ್ವಾತಂತ್ರ್ಯವನ್ನು ದೃಢವಾಗಿ ಅನುಮೋದಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಇದನ್ನೂ ಓದಿ: ಪತ್ರಕರ್ತನ ವಿರುದ್ಧ ದೇಶದ್ರೋಹ ಪ್ರಕರಣ: ಎಫ್‌ಐಆರ್‌ ರದ್ದುಗೊಳಿಸಿ ಸುಪ್ರೀಂ ಆದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights