ಹಿಂದೂಗಳಿಗಾಗಿ ಉಡುಪಿಯಲ್ಲಿ ಸಿದ್ದಿ ವಿನಾಯಕ ದೇವಾಲಯ ನಿರ್ಮಿಸಿದ ಕ್ರಿಶ್ಚಿಯನ್ ಉದ್ಯಮಿ
ಉಡುಪಿ ಜಿಲ್ಲೆಯ ಶಿರ್ವಾದ ಕ್ರಿಶ್ಚಿಯನ್ ಉದ್ಯಮಿ ಗೇಬ್ರಿಯಲ್ ನಜರೆತ್ ತನ್ನ ಹಿಂದೂ ಸಹೋದರರಿಗಾಗಿ ಭಗವಾನ್ ಸಿದ್ಧಿ ವಿನಾಯಕನ ದೇವಾಲಯವನ್ನು ನಿರ್ಮಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.
ದೇವಾಲಯವನ್ನು ನಿರ್ಮಿಸಲು ಅವರು 2 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ. ಅವರ ಪೋಷಕರಾದ ದಿ. ಫ್ಯಾಬಿಯನ್ ಸೆಬಾಸ್ಟಿಯನ್ ನಜರೆತ್ ಮತ್ತು ಸಬೀನಾ ನಜರೆತ್ ಅವರ 15 ಸೆಂಟ್ಸ್ ಪಿತ್ರಾರ್ಜಿತ ಭೂಮಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿದ್ದು, ಹಿಂದೂ ಸಮುದಾಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.
“ನಾನು 60 ವರ್ಷಗಳ ಹಿಂದೆ ದೇವರ ಭಕ್ತನಾದ ಸಮಯದಿಂದಲೂ ನಾನು ಸಿದ್ಧಿ ವಿನಾಯಕನಿಗೆ ಪೂಜೆ ಮಾಡುತ್ತಿದ್ದೇನೆ. ನನಗೆ ವಿನಾಯಕನ ಆಶೀರ್ವಾದವಿದೆ. ನಾನು 1959 ರಲ್ಲಿ ಎಸ್ಎಸ್ಎಲ್ಸಿ ಪೂರ್ಣಗೊಳಿಸಿ, ಉದ್ಯೋಗಕ್ಕಾಗಿ ಮುಂಬೈಗೆ ಹೋದೆ. ಆಗ ನನಗೆ ಕೇವಲ 14 ವರ್ಷ ವಯಸ್ಸಾಗಿತ್ತು. ಆಗ ನಾನು ಮುಂಬೈನ ಪ್ರಭಾದೇವಿ ದೇವಸ್ಥಾನದ ಬಳಿ ತಂಗಿದ್ದೆ. ನಂತರ, ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪ್ರತಿದಿನ ಸ್ವಾಮಿಗೆ ನಮಸ್ಕರಿಸುತ್ತಿದ್ದೆ” ಎಂದು ಅವರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೆಲವು ವರ್ಷಗಳ ನಂತರ, ಅವರು ಲೋಹ ಕರಗಿಸುವ ಉದ್ಯಮವನ್ನು ಆರಂಭಿಸಿದರು. ಈ ಮೂಲಕ ಅವರು ಯಶಸ್ವಿ ಉದ್ಯಮಿಯಾದರು, ಮೂರು ವಿಭಿನ್ನ ಸ್ಥಳಗಳಲ್ಲಿ ವ್ಯಾಪಾರ ಘಟಕಗಳನ್ನು ಪ್ರಾರಂಭಿಸಿದರು.
ಇತ್ತೀಚೆಗೆ ತೆರೆದ ದೇವಾಲಯದಲ್ಲಿ, ಕಪ್ಪು ಬಣ್ಣದ 36 ಇಂಚಿನ ಗಣೇಶ ವಿಗ್ರಹವನ್ನು ಸ್ಥಾಪಿಸಲಾಗಿದೆ. ದೇವಾಲಯದ ಬಳಿ ಅರ್ಚಕರಿಗಾಗಿ ಒಂದು ಮನೆಯನ್ನು ಸಹ ನಿರ್ಮಿಸಲಾಗಿದೆ. ದೇವಾಲಯದ ಆಡಳಿತವನ್ನು ಎಂಜಿನಿಯರ್ ನಾಗೇಶ್ ಹೆಗ್ಡೆ ಮತ್ತು ಗೇಬ್ರಿಯಲ್ ಅವರ ಸ್ನೇಹಿತರಾದ ಸತೀಶ್ ಶೆಟ್ಟಿ ಮತ್ತು ರತ್ನಕರ್ ಕುಕ್ಯಾನ್ ಒಳಗೊಂಡ ಮೂವರು ಸದಸ್ಯರ ಸಮಿತಿಗೆ ಹಸ್ತಾಂತರಿಸಲಾಗಿದೆ.
ಗೇಬ್ರಿಯಲ್ ಭಗವಾನ್ ಸಿದ್ಧಿ ವಿನಾಯಕನ ಮೇಲಿನ ಭಕ್ತಿಯಿಂದಾಗಿ ಯಾವುದೇ ದೇಣಿಗೆ ಇಲ್ಲದೆ ದೇವಾಲಯವನ್ನು ನಿರ್ಮಿಸಿದರು ಎಂದು ಸತೀಶ್ ಶೆಟ್ಟಿ ತಿಳಿಸಿದ್ದಾರೆ.
12 ವರ್ಷಗಳ ಹಿಂದೆ ಶಿರ್ವಾಕ್ಕೆ ಹಿಂತಿರುಗಿದ ಗೇಬ್ರಿಯಲ್, ಮುಂಬೈನಲ್ಲಿ ತನ್ನ ವ್ಯವಹಾರವು ಕುಂಟಿತಗೊಳ್ಳಲು ಆರಂಭವಾದ್ದರಿಂದ ಇಲ್ಲಿ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದರು. ಎಂಟು ವರ್ಷಗಳ ಹಿಂದೆ ಅವರು ಶಿರ್ವಾದ ಬಂಟಕಲ್ ಬಳಿ ‘ನಾಗ ಬಾನಾ’ (ಪವಿತ್ರ ತೋಪು) ನವೀಕರಿಸಿದ್ದರು. ಅಲ್ಲದೆ, ಅವರು 60 ಕ್ಕೂ ಹೆಚ್ಚು ಜನರಿಗೆ ಮದುವೆಯಾಗಲು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: Pegasus ಗೂಢಚರ್ಯೆಯ ಅಸಲಿ ಕ್ರೋನಾಲಜಿ ಏನು ಗೊತ್ತೇ? ಡೀಟೇಲ್ಸ್