ಲಸಿಕಾ ಕೇಂದ್ರದಲ್ಲಿ ಜಗಳ: ಯುವಕ ಆತ್ಮಹತ್ಯೆ; 10 ಪೊಲೀಸರು ವೃತ್ತಿಯಿಂದ ವಜಾ!
ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯಲ್ಲಿ 20 ವರ್ಷದ ಯುವಕನೊಬ್ಬ ಸೋಮವಾರ ಕೊರೊನಾ ಲಸಿಕಾ ಕೇಂದ್ರದಲ್ಲಿ ಪೊಲೀಸರೊಂದಿಗೆ ಜಗಳ ಮಾಡಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ನಂತರ ಹತ್ತು ಪೊಲೀಸರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಯುವಕ ತನ್ನ ಗ್ರಾಮದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. “ಆತ್ಮಹತ್ಯೆಗೆ ಪ್ರಚೋದನೆ” ಆರೋಪದ ಮೇಲೆ 10 ಪೊಲೀಸರ ವಿರುದ್ದ ದೂರು ದಾಖಲಾಗಿದೆ.
ಬಾಗಪತ್ ಜಿಲ್ಲೆಯ ವ್ಯಾಕ್ಸಿನೇಷನ್ ಕೇಂದ್ರವೊಂದರಲ್ಲಿ “ಯಾವುದೇ ಕಾರಣವಿಲ್ಲದೆ” ಆತನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಆತನ ಮನೆಗೆ ಬಂದ ಪೊಲೀಸರು ಆತನ ತಾಯಿಯನ್ನೂ ಥಳಿಸಿದ್ದು, ಪೊಲೀಸರು ಆತನನ್ನು ಆತ್ಮಹತ್ಯೆಗೆ ದೂಡಿದ್ದಾರೆ ಎಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಬಾಗಪತ್‌ನ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ನಡೆದ ಘಟನೆಯ 90 ಸೆಂಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕನಿಷ್ಠ ಇಬ್ಬರು ಪೊಲೀಸರು ಯುವಕನನ್ನು ಹಿಡಿಯಲು ಪ್ರಯತ್ನಿಸಿದ್ದು, ಅವರನ್ನು ತಡೆಯಲು ಯತ್ನಿಸಿದ ಎರಡನೇ ವ್ಯಕ್ತಿಯನ್ನು ಪೊಲೀಸರು ದೂರ ತಳ್ಳಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಯಡಿಯೂರಪ್ಪ ರಾಜೀನಾಮೆಯಿಂದ ಮನನೊಂದ ಅಭಿಮಾನಿ ಆತ್ಮಹತ್ಯೆ!
ವೈದ್ಯಕೀಯ ಸಿಬ್ಬಂದಿಗಳು ತನ್ನ ಮಗನ ಹೆಸರನ್ನು ಕರೆದರೂ, ಪೊಲೀಸರು ಆತನನ್ನು ವ್ಯಾಕ್ಸಿನೇಷನ್ ಕೇಂದ್ರದೊಳಗೆ ಹೋಗಲು ಬಿಡಲಿಲ್ಲ. ಆಗ ವಾಗ್ವಾದ ಆರಂಭವಾಯಿತು. ಪೊಲೀಸರು ನನ್ನ ಮಗನನ್ನು ತಳ್ಳಿದರು, ಆತ ಯಾಕೆ ಎಂದು ಪ್ರಶ್ನಿಸಿದಾಗ ಆತನಿಗೆ ಥಳಿಸಲು ಆರಂಭಿಸಿದರು ಎಂದು ಆತ್ನಹತ್ಯೆ ಮಾಡಿಕೊಂಡ ಯುವಕನ ತಂದೆ ಆರೋಪಿಸಿದ್ದಾರೆ.
ಪೊಲೀಸರು ನನ್ನ ಮಗನನ್ನು ಕೊಠಡಿಗೆ ಎಳೆದೊಯ್ದರು. ಅಲ್ಲಿ ಆತನ ಮೇಲೆ ಲಾಠಿಯಿಂದ ಹಲ್ಲೆ ಮಾಡಿದರು. ನಾವು ನನ್ನ ಮಗನನ್ನು ಅಲ್ಲಿಂದ ಕರೆದುಕೊಂಡು ಹೋದೆವು. ಆದರೆ, ಸಂಜೆಯ ವೇಳೆಗೆ ಪೊಲೀಸರು ನಮ್ಮ ಹಳ್ಳಿಗೆ ಬಂದು ಮನೆಯಲ್ಲಿದ್ದ ನನ್ನ ಪತ್ನಿಯ ಮೇಲೂ ಹಲ್ಲೆ ಮಾಡಿದರು. ಇದರಿಂದಾಗಿ ತುಂಬಾ ಭಯಬೀತನಾದ ನನ್ನ ಮಗ ಓಡಿಹೋದ. ಆತ ಮತ್ತೆ ನಮಗೆ ಸಿಕ್ಕಿದ್ದು ಶವವಾಗಿ ಎಂದು ಅವರು ತಿಳಿಸಿದ್ದಾರೆ.
“ನಾವು ಪ್ರಕರಣ ದಾಖಲಿಸಿದ್ದೇವೆ ಮತ್ತು 10 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ತಪ್ಪು ಮಾಡಿದ ಯಾರನ್ನೂ ಬಿಡುವುದಿಲ್ಲ” ಎಂದು ಬಾಗಪತ್ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಸಿಂಗ್ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೀವ ಅಮೂಲ್ಯವಾಗಿದೆ ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಬಿಹಾರ ಎನ್‌ಡಿಎಯಲ್ಲಿ ಬಿರುಕು? ಶಾಸಕಾಂಗ ಸಭೆ ಬಹಿಷ್ಕರಿಸಿದ ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ!