ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ಶಿಲ್ಪಾಶೆಟ್ಟಿ ಕಣ್ಣೀರು – ಕುಂದ್ರಾ ವಿರುದ್ಧ ಆಕ್ರೋಶ!
ಅಶ್ಲೀಲ ಚಿತ್ರ ನಿರ್ಮಾಣ ಹಾಗೂ ಬಿಡುಗಡೆ ಆರೋಪದ ಮೇಲೆ ಮುಂಬೈ ಪೊಲೀಸರು ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ತನಿಖೆ ಕೂಡ ಚುರುಕುಗೊಂಡಿದ್ದು ಕುಂದ್ರಾ ನಿವಾಸದ ಮೇಲೆ ಪೊಲೀಸ್ ದಾಳಿ ಮಾಡಿ, ಶಿಲ್ಪಾ ಶೆಟ್ಟಿಯನ್ನೂ ಕೂಡ ವಿಚಾರಣೆ ಮಾಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಶಿಲ್ಪಾ ಶೆಟ್ಟಿ ಕಣ್ಣೀರು ಹಾಕಿದ್ದು ಪತಿಯ ವಿರುದ್ಧ ಆಕ್ರೋಶಗೊಂಡಿದ್ದಾರೆನ್ನಲಾಗುತ್ತಿದೆ.
ಅಶ್ಲೀಲ ಚಿತ್ರ ನಿರ್ಮಾಣ ಆರೋಪ ಪ್ರಕರಣದಲ್ಲಿ ಹೆಚ್ಚಿನ ಶೋಧಗಳಿಗಾಗಿ ಮುಂಬೈ ಕ್ರೈಂ ಬ್ರಾಂಚ್ ರಾಜ್ ಕುಂದ್ರಾರ ಮುಂಬೈ ಮನೆಗೆ ಕರೆದೊಯ್ದು, ಶಿಲ್ಪಾಶೆಟ್ಟಿಯನ್ನೂ ಪ್ರಶ್ನಿಸಿದರು. ವಿಚಾರಣೆ ಬಳಿಕ ಶಿಲ್ಪಾಶೆಟ್ಟಿ ತುಂಬಾ ಅಸಮಾಧಾನಗೊಂಡಿದ್ದರು. ಅಲ್ಲದೆ, ಈ ವೇಳೆ ದಂಪತಿ ಮಧ್ಯೆ ದೊಡ್ಡ ವಾಗ್ವಾದವೇ ನಡೆದಿದೆ. ಯಾಕೆ ಈ ರೀತಿ ಮಾಡಿದ್ರಿ ಎಂದು ಕಿರುಚಿದ ಶಿಲ್ಪಾ, ಕುಂದ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗುತ್ತಿದೆ. ದಂಪತಿ ಸಮಾಧಾನ ಪಡೆಸಲು ಅಧಿಕಾರಿಗಳು ಮಧ್ಯ ಪ್ರವೇಶಿಸಬೇಕಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿಮ್ಮ ಈ ಕೃತ್ಯಗಳಿಂದಾಗಿ ನಮ್ಮ ಕುಟುಂಬ ತಲೆ ತಗ್ಗಿಸುವಂತಾಗಿದೆ. ಆರ್ಥಿಕವಾಗಿ ಕಷ್ಟ ಅನುಭವಿಸುವಂತಾಗಿದೆ. ಸಮಾಜದಲ್ಲಿ ಗೌರವ ಕಡಿಮೆಯಾಗಿದೆ. ಇಂತಹ ಕೆಲಸಗಳನ್ನು ಮಾಡಲು ಅವಶ್ಯಕತೆ ಆದ್ರೂ ಏನಿತ್ತು ಎಂದು ಶಿಲ್ಪಾ ಪತಿಗೆ ಪ್ರಶ್ನಿಸಿದ್ದಾರೆ. ಮಾರ್ಚ್ನಲ್ಲಿ ನಡೆದ ಅಶ್ಲೀಲ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಏನೂ ಕೂಡ ತಿಳಿದಿಲ್ಲ ಎಂದು ಶಿಲ್ಪಾ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಮುಂಬೈ ಅಪರಾಧ ಶಾಖೆಯು 11 ಜನರನ್ನು ಬಂಧಿಸಿದೆ. ಈ ಮಧ್ಯೆ ರಾಜ್ ಕುಂದ್ರಾ ಮತ್ತು ಶಿಲ್ಪಾಶೆಟ್ಟಿ ಅವರ ಆರ್ಥಿಕ ಮೂಲ ಮತ್ತು ಅಶ್ಲೀಲ ಚಿತ್ರಗಳ ದಂಧೆ ಪ್ರಕರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲು ಮುಂಬೈ ಕ್ರೈಂ ಬ್ರಾಂಚ್ ಹಣಕಾಸು ಲೆಕ್ಕ ಪರಿಶೋಧಕರನ್ನು ನೇಮಿಸಿದೆ.ತನಿಖೆಯಲ್ಲಿ ಶಿಲ್ಪಾಶೆಟ್ಟಿ ಮತ್ತು ರಾಜ್ಕುಂದ್ರಾ ಅವರ ಜಂಟಿ ಖಾತೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ.