ಕೊರೊನಾ: ಮತ್ತೆ ಕಾಡುತ್ತಿವೆ ಲಾಕ್‌ಡೌನ್‌, ಸೀಲ್‌ಡೌನ್‌ ಆತಂಕ; ಬಿಬಿಎಂಪಿ ಪ್ಲಾನ್‌ ಹೀಗಿದೆ!

ಕೊರೊನಾ 3ನೇ ಅಲೆಯ ಆತಂಕ ಎದುರಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಸರ್ಕಾರ ಬಿಬಿಎಂಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತರು ಯಾವುದೇ ರೀತಿಯ ಕ್ರಮಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಹೀಗಾಗಿ, ಬೆಂಗಳೂರಿನಲ್ಲಿ ಕೊರೊನಾ ಸೋಂಕುಗಳ ಸಂಖ್ಯೆ ಹೆಚ್ಚಾದಲ್ಲಿ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಲವು ಯೋಜನೆಗಳನ್ನು ರೂಪಿಸಿದೆ ಎನ್ನಲಾಗಿದ್ದು, ಸದ್ಯ, ಕೆಲವು ಕ್ರಮಗಳಿಗೆ ಮುಂದಾಗಿದೆ.

  • ಸೋಂಕಿತರು ಹೆಚ್ಚಾಗಿ ಪತ್ತೆಯಾಗುವ ಏರಿಯಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.
  • ಒಂದು ಮನೆಯಲ್ಲಿ ಮೂರಕ್ಕಿಂತ ಹೆಚ್ಚು ಜನ ಸೋಂಕಿತರು ಪತ್ತೆಯಾದರೆ ಇಡೀ ಮನೆ ಸೀಲ್ ಡೌನ್ ಮಾಡಬಹುದು.ಮನೆಯೊಳಗೆ, ಹೊರಗೆ ಯಾರು ಬರುವಂತಿಲ್ಲ -ಹೋಗುವಂತಿಲ್ಲ. ಅಗತ್ಯ ವಸ್ತುಗಳ ಸರಬರಾಜು ಮಾಡುವ ಹೊಣೆ ಬಿಬಿಎಂಪಿಯದ್ದಾಗಿದೆ.
  • ಒಂದು ಮನೆ ಅಥವಾ ಒಂದೇ ಜಾಗದಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಬಹುದು.
  • ಅತೀ ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶದ ಮಾರುಕಟ್ಟೆ, ಮದುವೆ ಸಮಾರಂಭ, ಚೌಲ್ಟ್ರಿ, ಹೋಟೆಲ್‌ಗಳನ್ನು ಬಂದ್ ಮಾಡಲಾಗುವುದು.
  • ಯಾವ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗತ್ತೋ ಅಂತಹ ಪ್ರದೇಶದಲ್ಲಿರುವ ಕಲ್ಯಾಣಮಂಟಪ, ಪಾರ್ಟಿ ಹಾಲ್‌, ಮಾರುಕಟ್ಟೆಗಳು 7 ದಿನಗಳ ಕಾಲ ಬಂದ್.

ಮಾತ್ರವಲ್ಲದೆ, ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಲು ಬಿಬಿಎಂಪಿ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಭೆ ನಡೆಸಿ ತೀರ್ಮಾನ ಕೈಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕೇರಳದಿಂದ ಬರುವವರಿಗೆ ಕೋವಿಡ್‌ ನೆಗೆಟಿವ್‌ ಕಡ್ಡಾಯ: 

ಕೇರಳದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಬಂದವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ರಿಪೋರ್ಟ್ ಇಲ್ಲದವರಿಗೆ ಸಿಬ್ಬಂದಿಗಳು ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ. ಕೇರಳದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ 72 ಗಂಟೆಗಳ ಹಿಂದಿನ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ತಮ್ಮ ಪೋಸ್ಟ್‌ ಎಡಿಟ್ ಮಾಡಿದ ಬಬುಲ್‌; ಯಾವ ಪಕ್ಷಕ್ಕೆ ಸೇರಲಿದ್ದಾರೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights