ದೊಡ್ಮನೆ ಮೊಮ್ಮಗಳ ಮೊದಲ ಚಿತ್ರ ತೆರೆಗೆ ಸಜ್ಜು : ‘ನಿನ್ನ ಸನಿಹಕೆ’ ಚಿತ್ರದ ಟ್ರೈಲರ್ ಬಿಡುಗಡೆ..!
ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
ಡಾ. ರಾಜ್ಕುಮಾರ್ ಅವರ ಮೊಮ್ಮಗಳು ಮತ್ತು ನಟ ರಾಮ್ಕುಮಾರ್ ಅವರ ಮಗಳು ಧನ್ಯಾ ರಾಮ್ಕುಮಾರ್ ಅವರ ಅಭಿನಯದ ಮೊದಲ ‘ನಿನ್ನ ಸನಿಹಕೆ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರ ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಸ್ಟ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ಮಧ್ಯೆ, ಭಾನುವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
‘ನಿನ್ನ ಸನಿಹಕೆ’ ಚಿತ್ರದ ಟ್ರೈಲರ್ ರಘು ದೀಕ್ಷಿತ್ ಯೂಟ್ಯೂಬ್ ಮ್ಯೂಸಿಕ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಇದುವರೆಗೆ ಎಂಟು ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ನಾಯಕಿ ಅಮೃತಾ ಅಲಿಯಾಸ್ ಡಿಂಪಿಯ ಪರಿಚಯದಿಂದ ಶುರುವಾಗುವ ಈ ಟ್ರೈಲರ್ನಲ್ಲಿ, ಕ್ರಮೇಣ ನಾಯಕನ ಪರಿಚಯ, ಅವರಿಬ್ಬರ ಸ್ನೇಹ, ಪ್ರೀತಿ, ಕಿತ್ತಾಟ ಮುಂತಾದ ಹಲವು ದೃಶ್ಯಗಳಿವೆ. ಈ ಪ್ರೇಮಕಥೆ ಜನ ಮನಮನಗೆಲ್ಲುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಸೂರಜ್ ಗೌಡ ನಿರ್ದೇಶನ ಮಾಡಿದ ಈ ಚಿತ್ರವನ್ನು ವೈಟ್ ಆಂಡ್ ಗ್ರೇ ಫಿಲಂಸ್ ನಿರ್ಮಿಸಿದೆ. ಎರಡು ವರ್ಷಗಳ ಹಿಂದೆ ಚಿತ್ರ ಪ್ರಾರಂಭವಾದಾಗ, ನಿರ್ದೇಶಕರಾಗಿ ಸುಮನ್ ಜಾದೂಗರ್ ಇದ್ದರು. ಆದರೆ, ಅವರಿಗೆ ಅಪಘಾತವಾಗಿ ಚಿತ್ರೀಕರಣ ಮುಂದುವರೆಸುವುದಕ್ಕೆ ಕಷ್ಟವಾದ ಕಾರಣ, ನಿರ್ದೇಶನದ ಜವಾಬ್ದಾರಿಯನ್ನು ಸೂರಜ್ಗೆ ನೀಡಲಾಗಿದೆ.
ಚಿತ್ರಕ್ಕೆ ಸೂರಜ್ ಬರೀ ಹೀರೋ ಅಷ್ಟೇ ಅಲ್ಲ, ಕಥೆ ಸಹ ಅವರದ್ದೇ. ಹಾಗಾಗಿ, ಈ ಚಿತ್ರ ನಿರ್ದೇಶಿಸುವುದಕ್ಕೆ ಅವರೇ ಸರಿ ಎಂಬ ಕಾರಣಕ್ಕೆ ಅವರಿಗೆ ನಿರ್ದೇಶನದ ಜವಾಬ್ದಾರಿ ವಹಿಸಲಾಗಿದೆ. ಸೂರಜ್, ಈ ಚಿತ್ರದಲ್ಲಿ ಕಥೆ, ನಿರ್ದೇಶನ ಮತ್ತು ನಟನೆಯ ಮೂರು ಜವಾಬ್ದಾರಿಗಳನ್ನು ಹೊತ್ತಿದ್ದಾರೆ.
ಧನ್ಯಾ ರಾಮ್ಕುಮಾರ್ ಮತ್ತು ಸೂರಜ್ ಗೌಡ ಅಲ್ಲದೆ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದರ್, ಮಂಜುನಾಥ ಹೆಗಡೆ ಸೇರಿದಂತೆ ಹಲವರು ನಟಿಸಿರುವ ‘ನಿನ್ನ ಸನಿಹಕೆ’ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್ ಕಲತ್ತಿ ಛಾಯಾಗ್ರಹಣ ಮಾಡಿದ್ದಾರೆ.