ಉಪಮುಖ್ಯಮಂತ್ರಿ ಪಟ್ಟಕ್ಕೆ ಜೋರಾದ ಪೈಪೋಟಿ : ಯಾರಿಗೆಲ್ಲಾ ಸ್ಥಾನ..?
ಸಚಿವ ಸ್ಥಾನದೊಂದಿಗೆ ಉಪಮುಖ್ಯಮಂತ್ರಿ ಪಟ್ಟಕ್ಕೂ ಪೈಪೋಟಿ ಜೋರಾಗಿದ್ದು ಯಾರಿಗೆಲ್ಲಾ ಡಿಸಿಎಂ ಸ್ಥಾನ ಸಿಗಲಿದೆ ಎನ್ನುವ ಬಗ್ಗೆ ಭಾರೀ ನೀರಿಕ್ಷೆ ಹುಟ್ಟಿದೆ.
ಸಿಎಂ ಸ್ಥಾನ ಕೈತಪ್ಪಿದ ಆಕಾಂಕ್ಷಿಗಳು ಸದ್ಯ ಡಿಸಿಎಂ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದ ಹೆಸರುಗಳೇ ಉಪಮುಖ್ಯಮಂತ್ರಿ ಸ್ಥಾನಕ್ಕೂ ಕೇಳಿ ಬರುತ್ತಿವೆ. ಹೈಕಮಾಂಡ್ ಮಟ್ಟದಲ್ಲಿ ಒಟ್ಟು ನಾಲ್ವರಿಗೆ ಡಿಸಿಎಂ ಸ್ಥಾನ ನೀಡಲು ಚಿಂತನೆ ಮಾಡಲಾಗುತ್ತಿದೆ. ಹಿಂದೂಳಿದ, ದಲಿತ, ಒಕ್ಕಲಿಗ, ವಾಲ್ಮೀಕಿ ಸಮುದಾಯದ ಆಧಾರದ ಮೇಲೆ ಡಿಸಿಎಂ ಸ್ಥಾನ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಶ್ರೀರಾಮುಲು, ಕೆ.ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಆರ್ ಅಶೋಕ್, ಸಿಟಿ ರವಿ ಡಿಸಿಎಂ ರೇಸ್ ನಲ್ಲಿದ್ದು ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಅನ್ನೋ ಕುತೂಹಲ ಮೂಡಿಸಿದೆ.
ಯಡಿಯೂರಪ್ಪ ಆಡಳಿತದಲ್ಲಿ ಒಕ್ಕಲಿಗ ಸಮುದಾಯದ ಅಶ್ವಥ ನಾರಾಯಣ್, ದಲಿತ ಸಮುದಾಯದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿಯನ್ನು ಡಿಸಿಎಂ ಆಗಿ ನೇಮಿಸಿದ್ದರು. ಇದೀಗ ಮೂವರು ಸಹ ಡಿಸಿಎಂ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಒಕ್ಕಲಿಗ ಸಮುದಾಯ, ಸೇವಾ ಹಿರಿತನ ಆಧಾರದ ಮೇಲೆ ಆರ್. ಅಶೋಕ್ ಅವರನ್ನು ಉಪ ಮುಖ್ಯಮಂತ್ರಿಯ್ನಾಗಿ ಮಾಡಲು ಪಕ್ಷದ ಮುಖಂಡರು ಸಮ್ಮತಿಸಿದ್ದಾರೆ. ಅದೇ ರೀತಿ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡುವ ವಿಚಾರದಲ್ಲಿ ಬಿ. ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ನೀಡಲು ಪಕ್ಷದ ವರಿಷ್ಠರು ನಿರ್ಧರಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಡಿಸಿಎಂ ಹುದ್ದೆಗಾಗಿ ಒಂದೆಡೆ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅನೇಕರು ಪ್ರಯತ್ನ ಮಾಡುತ್ತಿದ್ದಾರೆ. ನೂತನ ಸಿಎಂಗೆ ಡಿಸಿಎಂಗಳ ಆಯ್ಕೆಯೇ ದೊಡ್ಡ ತಲೆ ನೋವಾಗಿ ಪರಿಗಣಿಸಿದ್ದು, ಹೈಕಮಾಂಡ್ ಆಯ್ಕೆ ಮಾಡಿದವರನ್ನು ಡಿಸಿಎಂ ಗಳನ್ನಾಗಿ ಘೋಷಣೆ ಮಾಡುವುದಾಗಿ ಕೈತೊಳೆದು ಕೊಂಡಿದ್ದಾರೆ.
ಸಮುದಾಯ ಪ್ರಾತಿನಿಧ್ಯ, ಮುಂದಿನ ಚುನಾವಣೆಗೆ ಪಕ್ಷಕ್ಕೆ ಒಳಿತಾಗಲಿ ಎಂಬ ಆಶಯದಿಂದ ಸೃಷ್ಟಿಯಾದ ಈ ಅಸಂವಿಧಾನಿಕ ಹುದ್ದೆಗಳೇ ಇದೀಗ ಭಿನ್ನಮತ, ಲಾಬಿಗೆ ನಾಂದಿ ಹಾಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರು ಭವಿಷ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಯನ್ನು ಪಕ್ಷದ ಅಜೆಂಡಾದಿಂದಲೇ ತೆಗೆದು ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಡಿಸಿಎಂ ಹುದ್ದೆ ರಚನೆ ಭವಿಷ್ಯದಲ್ಲಿ ಬಿಜೆಪಿ ಅಜೆಂಡಾದಿಂದ ಕಿತ್ತು ಬಿಸಾಕುವ ಚರ್ಚೆ ನಡೆಯುತ್ತಿದೆ.

