ಮೊಟ್ಟೆ ಖರೀದಿಯಲ್ಲಿ ಭಷ್ಟಾಚಾರ ಆರೋಪ ಹೊತ್ತ ಶಶಿಕಲಾ ಜೊಲ್ಲೆಗೂ ಸಚಿವ ಸ್ಥಾನ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸಚಿವ ಸಂಪುಟ ಇಂದು ರಚನೆಯಾಗಲಿದೆ. ನೂತನ ಸಚಿವರ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದ್ದು, ಬಿಎಸ್‌ವೈ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಹೆಸರೂ ಕೂಡ ಹೊಸ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಬಿಎಸ್‌ವೈ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆಯವರು ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡಲಾಗುವ ಮೊಟ್ಟೆ ಖರೀದಿ ಟೆಂಟರ್‌ನಲ್ಲಿ ಅವ್ಯವಹಾರ ನಡೆಸಿದ್ದಾರೆ. ಗುತ್ತಿಗೆ ದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟು ಲಂಚ ಪಡೆದಿದ್ದಾರೆ ಎಂದು ಖಾಸಗೀ ಸುದ್ದಿ ವಾಹಿನಿವೊಂದು ಸ್ಟಿಂಗ್‌ ಆಪರೇಷನ್‌ ಮೂಲಕ ಹಗರಣವನ್ನು ಬಹಿರಂಗ ಪಡಿಸಿ, ಆರೋಪಿಸಿತ್ತು.

ಖಾಸಗಿ ವಾಹಿನಿ ನ್ಯೂಸ್‌ ಫಸ್ಟ್ ಮಾಡಿದ್ದ ಕುಟುಕು ಕಾರ್ಯಾಚರಣೆಯ ವಿಡಿಯೊದಲ್ಲಿ, “ಈ ಮುಂಚೆ ನೇರವಾಗಿ ಅಂಗನವಾಡಿ ಕೇಂದ್ರಗಳು ಮೊಟ್ಟೆ ಖರೀದಿ ಮಾಡುತ್ತಿದ್ದವು. ಆದರೆ ಈಗ ಕೇಂದ್ರೀಕೃತವಾಗಿ ಮೊಟ್ಟೆ ಪೂರೈಕೆಗೆ ಟೆಂಡರ್ ಕರೆದಿದ್ದೇವೆ. ನಿಮಗೆ ಟೆಂಡರ್ ಸಿಗುವಂತೆ ಮಾಡುತ್ತೇವೆ” ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿರುವುದು ದಾಖಲಾಗಿತ್ತು.

ಅದೇ ರೀತಿಯಲ್ಲಿ ಸಚಿವೆಯ ಸಂಪರ್ಕ ಕೊಟ್ಟ ಶಾಸಕ ಪರಣ್ಣ ಮುನವಳ್ಳಿ “ಟೆಂಡರ್ ನಿಮಗೆ ಆಗಬೇಕಾದರೆ ಪ್ರತಿ ತಿಂಗಳು ಸಚಿವರಿಗೆ ಒಂದು ಕೋಟಿ ಮತ್ತು ತನಗೆ 30 ಲಕ್ಷ ಹಣ ನೀಡಬೇಕು” ಎಂದು ಬೇಡಿಕೆಯಿಟ್ಟಿರುವುದು ಸಹ ರಹಸ್ಯ ಕಾರ್ಯಾಚರಣೆಯಲ್ಲಿ ದಾಖಲಾಗಿತ್ತು. ಟೆಂಡರ್‌ಗಾಗಿ ಸಚಿವೆಯ ಸೂಚನೆಯಂತೆ ಚಿಕ್ಕೋಡಿಯ ಸಂಜಯ್ ಅರಗಿ ಎಂಬುವವರು 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರೆ ಎಂದು ನ್ಯೂಸ್‌ಫಸ್ಟ್ ತಂಡ ತಿಳಿಸಿತ್ತು.

ಪಾರದರ್ಶಕವಾಗಿ ಮತ್ತು ಪಕ್ಷಪಾತರಹಿತವಾಗಿ ಟೆಂಡರ್ ನಡೆಸಬೇಕಾದ ಸಚಿವರು, ಲಂಚ ಪಡೆದು ಅಕ್ರಮವಾಗಿ ಟೆಂಟರ್ ಕೊಡಲು ಮುಂದಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಮಕ್ಕಳಿಗೆ, ಗರ್ಭಿಣಿಯರಿಗೆ ತಲುಪಬೇಕಾದ ಹಣದ ವ್ಯವಸ್ಥಿತ ಲೂಟಿಯಾಗಿದೆ ಎಂದು ಸಾರ್ವಜನಿಕರು ಅಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಭ್ರಷ್ಟಾಚಾರವನ್ನ ಖಂಡಿಸಿ, ಬೆಂಗಳೂರಿನ ಜೆ.ಸಿ ನಗರ ರಸ್ತೆಯಲ್ಲಿರುವ ಶಶಿಕಲಾ ಜೊಲ್ಲೆಯವರ ನಿವಾಸದ ಮುಂದೆ ಜಮಾಯಿಸಿದ್ದ ಕಾಂಗ್ರೆಸ್‌‌ ಕಾರ್ಯಕರ್ತರು, ನಿವಾಸಕ್ಕೆ ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಮೊಟ್ಟೆಯಲ್ಲಿ ಬಂಡಾರ ಕದ್ದ ಸಚಿವೆ; ಶಶಿಕಲಾ ಜೊಲ್ಲೆ ಮನೆ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights