ಮೊಟ್ಟೆಯಲ್ಲಿ ಬಂಡಾರ ಕದ್ದ ಸಚಿವೆ; ಶಶಿಕಲಾ ಜೊಲ್ಲೆ ಮನೆ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ!

ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯದಲ್ಲಿ ಮಾತೃಪೂರ್ಣ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯ ಮೂಲಕ ಗರ್ಭಿಣಿ ಮತ್ತು ಮಕ್ಕಳಿಗೆ ಶಿಶುವಿಹಾರಗಳ ಮೂಲಕ ಮೊಟ್ಟೆಯನ್ನು ವಿತರಿಸಲಾಗುತ್ತಿದೆ. ಅದಕ್ಕಾಗಿ ಮೊಟ್ಟೆ ಖರೀದಿ ಮಾಡಲು ಟೆಂಡರ್‌ ಕರೆದಿದ್ದು, ಟೆಂಡರ್‌ ನೀಡಲು ಸಚಿವೆ ಶಶಿಕಲಾ ಜೊಲ್ಲೆ ಮತ್ತು ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಲಂಚ ಪಡೆದಿದ್ದಾರೆ ಎಂದು ಖಾಸಗಿ ವಾಹಿನಿ ನ್ಯೂಸ್‌ ಫಸ್ಟ್ ರಹಸ್ಯ ಕಾರ್ಯಚರಣೆ ನಡೆಸಿದ್ದು, ವಿಡಿಯೋ ಬಿಡುಗಡೆ ಮಾಡಿದೆ.

ನ್ಯೂಸ್‌ ಫಸ್ಟ್ ಮಾಡಿದ ವರದಿಯಲ್ಲಿ ಈ ಮುಂಚೆ ನೇರವಾಗಿ ಅಂಗನವಾಡಿ ಕೇಂದ್ರಗಳು ಮೊಟ್ಟೆ ಖರೀದಿ ಮಾಡುತ್ತಿದ್ದವು. ಆದರೆ ಈಗ ಕೇಂದ್ರೀಕೃತವಾಗಿ ಮೊಟ್ಟೆ ಪೂರೈಕೆಗೆ ಟೆಂಡರ್ ಕರೆದಿದ್ದೇವೆ. ನಿಮಗೆ ಟೆಂಡರ್ ಸಿಗುವಂತೆ ಮಾಡುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಅದೇ ರೀತಿಯಲ್ಲಿ ಸಚಿವೆಯ ಸಂಪರ್ಕ ಕೊಟ್ಟ ಶಾಸಕ ಪರಣ್ಣ ಮುನವಳ್ಳಿ “ಟೆಂಡರ್ ನಿಮಗೆ ಆಗಬೇಕಾದರೆ ಪ್ರತಿ ತಿಂಗಳು ಸಚಿವರಿಗೆ ಒಂದು ಕೋಟಿ ಮತ್ತು ತನಗೆ 30 ಲಕ್ಷ ಹಣ ನೀಡಬೇಕು” ಎಂದು ಬೇಡಿಕೆಯಿಟ್ಟಿರುವುದು ಸಹ ರಹಸ್ಯ ಕಾರ್ಯಾಚರಣೆಯಲ್ಲಿ ದಾಖಲಾಗಿದೆ.

ಟೆಂಡರ್‌ಗಾಗಿ ಸಚಿವೆಯ ಸೂಚನೆಯಂತೆ ಚಿಕ್ಕೋಡಿಯ ಸಂಜಯ್ ಅರಗಿ ಎಂಬುವವರು 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರೆ ಎಂದು ನ್ಯೂಸ್‌ಫಸ್ಟ್ ತಂಡ ತಿಳಿಸಿದೆ. ಪಾರದರ್ಶಕವಾಗಿ ಮತ್ತು ಪಕ್ಷಪಾತರಹಿತವಾಗಿ ಟೆಂಡರ್ ನಡೆಸಬೇಕಾದ ಸಚಿವರು, ಲಂಚ ಪಡೆದು ಅಕ್ರಮವಾಗಿ ಟೆಂಟರ್ ಕೊಡಲು ಮುಂದಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಮಕ್ಕಳಿಗೆ, ಗರ್ಭಿಣಿಯರಿಗೆ ತಲುಪಬೇಕಾದ ಹಣದ ವ್ಯವಸ್ಥಿತ ಲೂಟಿಯಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರ ಭ್ರಷ್ಟಾಚಾರವನ್ನ ಖಂಡಿಸಿ, ಬೆಂಗಳೂರಿನ ಜೆ.ಸಿ ನಗರ ರಸ್ತೆಯಲ್ಲಿರುವ ಶಶಿಕಲಾ ಜೊಲ್ಲೆಯವರ ಅಧಿಕೃತ ಮುಂದೆ ಜಮಾಯಿಸಿದ NSUI ಕಾರ್ಯಕರ್ತರು, ನಿವಾಸಕ್ಕೆ ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದಾರೆ.

ಭ್ರಷ್ಟಾಚಾರ ನಡೆಸಿರುವ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು ಮತ್ತು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪೆಗಾಸಸ್ ಪರಿಣಾಮ? ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್‌ ಬಳಕೆಗೆ ಮಾರ್ಗಸೂಚಿ ನೀಡಿದ ಮಹಾ ಸರ್ಕಾರ!

ಒಂದೆಡೆ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಣ ನೀಡದೆ ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿರುವ ಬಿಜೆಪಿ ಸರ್ಕಾರ, ಇನ್ನೊಂದೆಡೆ ಅದೇ ಕಾರ್ಯಕ್ರಮಗಳನ್ನು ತಮ್ಮ ಜೇಬು ತುಂಬಿಕೊಳ್ಳಲು ದುರ್ಬಳಕೆ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಮಾತೃಪೂರ್ಣ’ ಯೋಜನೆಯಡಿ ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವ ಮೊಟ್ಟೆಗಳ ಖರೀದಿಯಲ್ಲಿ ಲಂಚ ಪಡೆದಿರುವ ಹಗರಣದಲ್ಲಿ ಭಾಗಿಯಾಗಿರುವ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ
ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಈ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಬೇಕು. ಲಂಚದ ಹಣಕ್ಕೆ ಬಿಜೆಪಿ ನಾಯಕರು ಜೊಲ್ಲು ಸುರಿಸುತ್ತಿರುವವರು ಎಂದು ಲೋಕಕ್ಕೆ ಗೊತ್ತಿದೆ. ಆದರೆ ಇವರು ಸಣ್ಣಮಕ್ಕಳು ಮತ್ತು ಗರ್ಭಿಣಿಯರ ತಟ್ಟೆಗೂ ಕೈಹಾಕುವ ಮಟ್ಟಕ್ಕೆ ಇಳಿದಿರುವುದು ನ್ಯೂಸ್‌ಫಸ್ಟ್ ನನಡೆಸಿರುವ ಕುಟುಕು ಕಾರ್ಯಾಚರಣೆಯಿಂದ ಬಯಲಾಗಿದೆ” ಎಂದಿದ್ದಾರೆ.

ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ: ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ

ಖಾಸಗಿ ವಾಹಿನಿಯ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸಿ ನನ್ನನ್ನು ಆರೋಪಿತಳನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿರುವುದು ದುರದೃಷ್ಟಕರ. ಖಾಸಗಿ ವಾಹಿನಿಯಲ್ಲಿ ಹೇಳುತ್ತಿರುವ ಹಾಗೆ ಮೊಟ್ಟೆ ಖರೀದಿಗೆ ಇದುವರೆಗೂ ಯಾವದೇ ಟೆಂಡರ್ ಕರೆದಿಲ್ಲ. ಅಲ್ಲದೇ ಟೆಂಡರ್ ನೀಡಲು ನಾನು ವಯಕ್ತಿಕವಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, “ನಮ್ಮ ಬಿಜೆಪಿ ಪಕ್ಷದ ಶಾಸಕರಾದ ಪರಣ್ಣ ಮುನವಳ್ಳಿಯವರು ತಮ್ಮ ಸಂಬಂಧಿಕರು ಎಂದು ಕರೆದುಕೊಂಡು ಬಂದಾಗ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಇದರಲ್ಲಿ ಯಾವುದೇ ಹಣಕಾಸಿನ ವ್ಯವಹಾರದ ಕುರಿತು ನಾನು ಮಾತನಾಡಿಲ್ಲ. ಇದರ ಹಿಂದೆ ವ್ಯವಸ್ಥಿತ ರಾಜಕೀಯ ಪಿತೂರಿಯಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಹೋರಾಟದಲ್ಲಿ ಮೃತಪಟ್ಟ ರೈತರ ಬಗ್ಗೆ ದಾಖಲೆಯೇ ಇಲ್ಲ ಎಂದ ಕೇಂದ್ರ; ಅಂಕಿಅಂಶ ಕೊಟ್ಟ ಪಂಜಾಬ್‌ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights