ಟೊಕಿಯೋ ಒಲಿಂಪಿಕ್ ನಲ್ಲಿ ಚಿನ್ನದ ಪದಕ : ‘ನೀರಜ್’ ಹೆಸರಿನ ಜನರಿಗೆ ಉಚಿತ ಇಂಧನ..!
ಟೊಕಿಯೋ ಒಲಿಂಪಿಕ್ ನಲ್ಲಿ ಭಾರತಕ್ಕೆ ಚಿನ್ನದ ಪದಕದ ಗೆಲುವನ್ನು ಸಂಭ್ರಮಿಸಲು ಗುಜರಾತ್ ಪೆಟ್ರೋಲ್ ಪಂಪ್ ‘ನೀರಜ್’ ಹೆಸರಿನ ಜನರಿಗೆ ಉಚಿತ ಇಂಧನವನ್ನು ನೀಡುತ್ತಿದೆ.
ಇತ್ತೀಚೆಗೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. ಇದನ್ನು ಸಂಭ್ರಮಿಸಲು ಗುಜರಾತ್ ನ ಭರೂಚ್ ಜಿಲ್ಲೆಯ ನೇತ್ರಾಂಗ್ ಪಟ್ಟಣದ ಪೆಟ್ರೋಲ್ ಪಂಪ್ ಮಾಲೀಕರು ‘ನೀರಜ್’ ಹೆಸರಿನ ಜನರಿಗೆ ಉಚಿತ ಇಂಧನವನ್ನು ನೀಡುತ್ತಿದ್ದಾರೆ.
ಎರಡು ದಿನಗಳಲ್ಲಿ 28 ಜನರು ಇದನ್ನು ಬಳಸಿಕೊಂಡಿದ್ದಾರೆ. ಮಾತ್ರವಲ್ಲದೆ ನೀರಜ್ ಹೆಸರಿನ ಗ್ರಾಹಕರಿಗೆ ಪೆಟ್ರೋಲ್ ಪಂಪ್ ಮಾಲೀಕ ಅಯೂಬ್ ಪಠಾಣ್ ಮತ್ತು ಅವರ ಸಿಬ್ಬಂದಿ ಹೂಗುಚ್ಛಗಳನ್ನು ನೀಡಿ ಗೌರವಿಸಿದರು.
ಗೌರವದಿಂದ ಸಂತಸಗೊಂಡ ಭರೂಚ್ ಪಟ್ಟಣದ ನಿವಾಸಿ ನೀರಜ್ ಗಮಿತ್ (30), “ಪೆಟ್ರೋಲ್ ಪಂಪ್ ಮಾಲೀಕರ ಈ ನಡೆಯನ್ನು ನಾನು ಪ್ರಶಂಸಿಸುತ್ತೇನೆ. ನೀರಜ್ ಚೋಪ್ರಾ ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡಿದರು. ಈ ರೀತಿಯಾಗಿ ನಾವು ಕ್ರೀಡಾಪಟುವನ್ನು ಗೌರವಿಸಬೇಕಿದೆ” ಎಂದರು.
ಜುನಾಗಢದ ಗಿರ್ನಾರ್ ರೋಪ್‌ವೇ ಸರ್ವೀಸ್ ಮ್ಯಾನೇಜ್‌ಮೆಂಟ್ ಕೂಡ ‘ನೀರಜ್’ ಹೆಸರಿನ ಜನರು ಆಗಸ್ಟ್ 20 ರವರೆಗೆ ಉಚಿತ ರೋಪ್‌ವೇ ಸವಾರಿಯನ್ನು ಆನಂದಿಸಬಹುದು ಎಂದು ಘೋಷಿಸಿದೆ.
“ಒಟ್ಟು 35 ಜನರು ಉಚಿತ ಸವಾರಿಗಳನ್ನು ಪಡೆದಿದ್ದಾರೆ. ಜನರು ಸಂತೋಷದಿಂದ ಮತ್ತು ನಮ್ಮ ನಡೆಯನ್ನು ಮೆಚ್ಚುತ್ತಿದ್ದಾರೆ “ಎಂದು ಗಿರ್ನಾರ್ ರೋಪ್ ವೇ ಆಯೋಜಕರು ಉಷಾ ಬ್ರೆಕೋ ಲಿಮಿಟೆಡ್ (ಯುಬಿಎಲ್) ನ ಪ್ರಾದೇಶಿಕ ಮುಖ್ಯಸ್ಥ (ಪಶ್ಚಿಮ) ದೀಪಕ್ ಕಪ್ಲಿಶ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
“ನೀರಜ್ ಚೋಪ್ರಾ ಚಿನ್ನ ಗೆಲ್ಲುವ ಮೂಲಕ ಹೆಮ್ಮೆ ಪಡುವಂತೆ ಮಾಡಿದ್ದಾರೆ. ನಾವು ಆತನನ್ನು ಗೌರವಿಸಲು ಏನಾದರೂ ಮಾಡಬೇಕು ಎಂದು ಯೋಚಿಸಿದೆವು. ನೀರಜ್ ಚೋಪ್ರಾ ಅವರನ್ನು ಅಭಿನಂದಿಸುವ ಸರಳ ಸಾಮಾಜಿಕ ಮಾಧ್ಯಮ ಪೋಸ್ಟ್ ಸಾಕಾಗುವುದಿಲ್ಲ ಎಂದು ಅಂದುಕೊಂಡೆವು. ಬದಲಿಗೆ ಉಚಿತ ಸವಾರಿ ನೀಡುವ ಕಲ್ಪನೆಯು ಈ ರೀತಿ ಬಂದಿತು, ” ಎಂದು ಯುಬಿಎಲ್ ಕಾರ್ಯನಿರ್ವಾಹಕ ಹೇಳಿದ್ದಾರೆ.
ಉಚಿತ ಸವಾರಿಗಳನ್ನು ಪಡೆಯಲು, “ನೀರಜ್” ಹೆಸರಿನ ಜನರು ತಮ್ಮ ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಗಿ ಅಥವಾ ಮತದಾರರ ಗುರುತಿನ ಚೀಟಿಯನ್ನು ಒದಗಿಸಬೇಕು ಮತ್ತು ಆಫರ್ ಆಗಸ್ಟ್ 20 ರವರೆಗೆ ತೆರೆದಿರುತ್ತದೆ.