ಸೆಪ್ಟೆಂಬರ್ 10ರ ವೇಳೆಗೆ ಕರ್ನಾಟಕದಲ್ಲಿ 30 ಲಕ್ಷ ಕೊರೊನಾ ಪ್ರಕರಣ ಸಾಧ್ಯತೆ: ವಿಶ್ಲೇಷಣೆ
ಸೆಪ್ಟೆಂಬರ್ 10 ರ ವೇಳೆಗೆ ಭಾರತದ ಕೋವಿಡ್ ಪ್ರಕರಣಗಳು 32.8 ಕೋಟಿ (3,28,42,435) ಮತ್ತು ಸಾವುಗಳು 4.40 ಲಕ್ಷ (4,40,220) ಮುಟ್ಟುವ ನಿರೀಕ್ಷೆಯಿದೆ. ಅಂತೆಯೇ ಕರ್ನಾಟಕದ ಕೋವಿಡ್ ಅಂಕಿಅಂಶಗಳು 29.50 ಲಕ್ಷ (29,50,000) ಮತ್ತು ಸಾವುಗಳ ಸಂಖ್ಯೆ 37,470ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಜೀವನ್ ರಕ್ಷಾ ಸಮೀಕ್ಷೆ ವಿಶ್ಲೇಷಿಸಿದೆ.
ಅತೀ ಹೆಚ್ಚು ಪ್ರಕರಣಗಳು ದಾಖಲಾಗುವ ಪ್ರದೇಶಗಳಲ್ಲಿ ಬೆಂಗಳೂರು ನಗರ ಮೊದಲನೆಯ ಸ್ಥಾನದಲ್ಲಿದ್ದು, ಕಳೆದ ನಾಲ್ಕು ವಾರಗಳಲ್ಲಿ ಹೊಸ ಪ್ರಕರಣಗಳ ಶೇಕಡಾ 24 ರಷ್ಟು ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ 18.4 ಶೇಕಡಾ ಪ್ರಕರಣಗಳನ್ನು ದಾಖಲಿಸಿದೆ. ನಂತರದಲ್ಲಿ, ಮೈಸೂರು, ಉಡುಪಿ ಮತ್ತು ಹಾಸನ ಜಿಲ್ಲೆಗಳಿವೆ.
“ಕರ್ನಾಟಕವು ಅತ್ಯಂತ ಜಾಗರೂಕತೆಯನ್ನು ವಹಿಸಬೇಕು. ಹೊರಗಿನಿಂದ ಬರುವವರಿಗೆ ಕಡಿವಾಣ ಹಾಕಬೇಕು. ಇಂದು ಕರ್ನಾಟಕವು ಸುಮಾರು 22,000 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಮಾರ್ಚ್ ಮಧ್ಯದಲ್ಲಿ ಅಬ್ಬರಿಸಿದ 2ನೇ ಅಲೆ ಸಮಯದಲ್ಲಿ, ಕೇವಲ ಐದರಿಂದ ಆರು ವಾರಗಳಲ್ಲಿ, ಕರ್ನಾಟಕವು 6 ಲಕ್ಷ ಸಕ್ರಿಯ ಪ್ರಕರಣಗಳನ್ನು ದಾಖಲಿಸಿತು. ರಾಜ್ಯ ಸರ್ಕಾರವು ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾರ್ಯತಂತ್ರವನ್ನು ರೂಪಿಸಬೇಕಾಗಿದೆ” ಎಂದು ಜೀವನ್ ರಕ್ಷಾದ ಸಂಚಾಲಕ ಮೈಸೂರು ಸಂಜೀವ್ ಹೇಳಿದ್ದಾರೆ.
ಜುಲೈನಲ್ಲಿ ಕರ್ನಾಟಕವು 61,314 ಹೊಸ ಕೋವಿಡ್ ಪ್ರಕರಣಗಳು ಮತ್ತು 1,522 ಸಾವುಗಳನ್ನು ವರದಿ ಮಾಡಿದೆ. ಆಶ್ಚರ್ಯಕರವಾಗಿ, ಕರ್ನಾಟಕದಲ್ಲಿ ಕೋವಿಡ್ ಚಿಕಿತ್ಸೆಗಾಗಿ 28,060 ಹೊಸ ವಿಮಾ ಹಕ್ಕುಗಳನ್ನು ನೋಂದಾಯಿಸಲಾಗಿದೆ. ಅಂದರೆ ಅವುಗಳಲ್ಲಿ 46 ಪ್ರತಿಶತದಷ್ಟು ಜನರು ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿದ್ದಾರೆ.
ವಾಸ್ತವವಾಗಿ, “ಜುಲೈನಲ್ಲಿ ಕರ್ನಾಟಕದಲ್ಲಿ ನಿಜವಾದ ಪ್ರಕರಣಗಳ ಸಂಖ್ಯೆ ಸುಮಾರು 1.75 ಲಕ್ಷದಿಂದ 1.9 ಲಕ್ಷ ಮತ್ತು ಸುಮಾರು 3,000 ಸಾವುಗಳು ಸಂಭವಿಸಿವೆ” ಎಂದು ಸಂಜೀವ್ ಹೇಳಿದ್ದಾರೆ.
ಇದನ್ನೂ ಓದಿ: 450 ವರ್ಷಗಳ ಇತಿಹಾಸವುಳ್ಳ ಗೋಲ್ಗುಂಬಜ್ನ ಛಾವಣಿಯ ಒಂದು ಭಾಗ ಕುಸಿದಿದೆ!

