ಬೊಮ್ಮಾಯಿ ಸಂಪುಟ ಸೇರ್ತಾರಾ ರಮೇಶ್‌ ಜಾರಕಿಹೊಳಿ? : ಉರಿಯೋ ಬೆಂಕಿಗೆ ತುಪ್ಪ ಸುರಿದ್ರಾ ಸಾಹುಕಾರ್?

ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ರಚನೆಯಾಗಿದ್ದು ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಆದರೆ ಕೆಲ ಸಚಿವರು ಖಾತೆ ಕ್ಯಾತೆ ತೆಗೆದಿದ್ದು ಅಸಮಾಧನ ಇನ್ನೂ ತಣ್ಣಗಾಗಿಲ್ಲ. ಅದಾಗಲೇ ಬೊಮ್ಮಾಯಿ ಸಂಪುಟಕ್ಕೆ ಮತ್ತಿಬ್ಬರು ಸೇರಿಕೊಳ್ಳುವ ಮಾತುಗಳು ಕೇಳಿಬರುತ್ತಿವೆ.

ಹೌದು.. ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸಿಡಿ ಕೇಸ್ ನಲ್ಲಿ ಸಿಕ್ಕಿಕೊಂಡಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್‌ ಅವರಿಗೆ ಅತಿ ಶೀಘ್ರದಲ್ಲೇ ಸ್ಥಾನ ಸಿಗಲಿದೆ ಎಂದು ಅರಬಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆಯಲ್ಲಿ ಮೋಸವಾಗಿದೆ ಎಂದು ಆರೋಪಿಸಿದ ಸಚಿವ ಆನಂದ್ ಸಿಂಗ್ ಹಾಗೂ ಸಚಿವ ಎಂಟಿಬಿ ನಾಗರಾಜ್ ಹಾಗೂ ಬಿಜೆಪಿ ಪಾಳಯದಲ್ಲಿ ಸಚಿವ ಸ್ಥಾನ ಸಿಗದವರಲ್ಲಿ ಬಂಡಾಯದ ಕಿಚ್ಚನ್ನು ಹೆಚ್ಚಿಸಿದೆ. ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದವರಿಗೆ ಹಾಗೂ ಉನ್ನತ ಖಾತೆ ಸಿಗದವರ ಅಸಮಧಾನ ಇನ್ನೂ ಶಮನವಾಗಿಲ್ಲ. ಅದಾಗಲೇ ಮತ್ತಿಬ್ಬರಿಗೆ ಸಚಿವ ಸ್ಥಾನ ಸಿಗುವ ಮಾತು ಬಿಜೆಪಿ ಅಸಮಾಧಾನಿತರನ್ನು ಮತ್ತಷ್ಟು ಕೆರಳಿಸಿದೆ.

ಆರ್‌.ಟಿ.ನಗರದಲ್ಲಿ ಮುಖ್ಯಮಂತ್ರಿಗಳ ಖಾಸಗಿ ನಿವಾಸದಲ್ಲಿ ಬೊಮ್ಮಾಯಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ ಅವರು, ನಾನು ಸಚಿವ ಸ್ಥಾನಕ್ಕೆ ಆಸೆ ಪಟ್ಟಿಲ್ಲ, ಕೆಎಂಎಫ್‌ನಲ್ಲೇ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಆ ಹುದ್ದೆಯೇ ಸಾಕು ಎಂದಿದ್ದಾರೆ.

ಮುಂದುರೆದು ಮಾತನಾಡಿದ ಬಾಲಚಂದ್ರ, ನಾವು (ಜಾರಕಿಹೊಳಿ ಸೋದರರು) ಪಕ್ಷ ಹಾಗೂ ಸರ್ಕಾರದ ವಿರುದ್ಧ ಹೋಗೋದಿಲ್ಲ. ಯಾವುದೇ ಗೌಪ್ಯ ಸಭೆ ನಡೆಸಿಲ್ಲ. ವಿಶ್ವಾಸದಿಂದ ಕೆಲ ಶಾಸಕರು ಆಗಾಗ್ಗೆ ಒಂದೆಡೆ ಸೇರುತ್ತೇವೆ ಅಷ್ಟೇ. ಆದರೆ ಆ ಸಭೆಗಳಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.

ಮಾಜಿ ಸಚಿವರಾದ ರಮೇಶ್‌ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್‌ ಅವರಿಗೆ ಖಂಡಿತ ಒಳ್ಳೆಯದಾಗುತ್ತದೆ. ಬೊಮ್ಮಾಯಿ ಸರ್ಕಾರದಲ್ಲಿ ಆ ಇಬ್ಬರಿಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights