ಫ್ಯಾಕ್ಟ್‌ಚೆಕ್ : ಬೂರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ‘ಗಣೇಶನ ಮೂರ್ತಿ’ಗಳನ್ನು ಒಡೆದು ಹಾಕಿದ್ದು ನಿಜ ! ಆದರೆ

ಆಗಸ್ಟ್‌ ತಿಂಗಳ ಕೊನೆಯ ವಾರದಲ್ಲಿ ಬಂದ ಗೌರಿ ಗಣೇಶನ ಹಬ್ಬವನ್ನು ದೇಶದ್ಯಾಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಅನ್ನಧಾನ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ನೆರೆವೇರಿಸಿ ಸಂಭ್ರಮಿಸಿದ್ದಾರೆ.

ಇದೆಲ್ಲದರ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ” ಶಾಪಿಂಗ್‌ ಮಾಲ್‌ವೊಂದರಲ್ಲಿ ಇರಿಸಲಾಗಿದ್ದ ಗಣೇಶನ ಮೂರ್ತಿಗಳನ್ನು ಬುರ್ಖಾಧಾರಿ ಮಹಿಳೆಯೊಬ್ಬರು ಕೆಳಗೆ ಬೀಳಿಸಿ ಛಿದ್ರಗೊಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ”

ಗಣೇಶ ಹಬ್ಬದ ಸಂದರ್ಭದಲ್ಲಿ ಮತ್ತು ನಂತರ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದರೆ ಈ ವಿಡಿಯೋ ಎಲ್ಲಿಂದ ಬಂದಿದೆ ಅಥವಾ ಈ ಘಟನೆಯ ಹಿನ್ನಲೆ ಏನು ಎಂಬುದನ್ನು ಹೇಳಿಲ್ಲ, ಆದರೆ ಈ ವಿಡಿಯೋವನ್ನು ಹಿಂದೂ, ಮುಸ್ಲಿಂ ಎಂಬ ಕೋಮು ವೈಷಮ್ಯದ ನಿರೂಪಣೆಯೊಂದಿಗೆ  ಪ್ರಸಾರವಾಗುತ್ತಿದೆ.

ಕೆಲವರು ಈ ವೈರಲ್ ವಿಡಿಯೋ ನಮ್ಮ ಏನ್‌ಸುದ್ದಿ.ಕಾಂ ವಾಟ್ಸಾಪ್‌ ನಂಬರ್‌ಗೂ ಕಳುಹಿಸುವ ಮೂಲಕ ಇದರ ಸತ್ಯಾಸತ್ಯತೆ ಏನಿರಬಹುದು ತಿಳಿಸಿ ಎಂದು ವಿನಂತಿಸಿದ್ದಾರೆ. ಗಣೇಶನ ಮೂರ್ತಿಗಳನ್ನು ಬುರ್ಖಾಧಾರಿ ಮಹಿಳೆ ಒಡೆದು ಹಾಕಿರುವ ವೈರಲ್ ವಿಡಿಯೊ ಕುರಿತಾದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ದೃಶ್ಯಗಳಿಂದ ಕ್ಲೂ ತೆಗೆದುಕೊಂಡು ಗೂಗಲ್ ಸರ್ಚ್ ಮಾಡಿದಾಗ ವೈರಲ್ ಆಗಿರುವ ವಿಡಿಯೊ August 16, 2020 ಬಹ್ರೇನ್‌ನ ಜುಫೈರ್‌ ಎಂಬಲ್ಲಿನ ಶಾಪಿಂಗ್‌ ಮಾಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .

ನಡೆದಿದ್ದೇನು ?

ಬಹ್ರೇನ್ ರಾಜಧಾನಿ ಮನಾಮದ ಪಕ್ಕದಲ್ಲೇ ಇರುವ ಜುಫೈರ್ ನಲ್ಲಿ 2020ರಲ್ಲಿ ಈ ಘಟನೆ ನಡೆದಿದೆ. ಗಣೇಶ ಚತುರ್ಥಿ ಹಬ್ಬ ಸನ್ನಿಹಿತದಲ್ಲಿರುವ ಹಿನ್ನೆಲೆ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸೂಪರ್ ಮಾರ್ಕೇಟ್ ನಲ್ಲೂ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಈ ವೇಳೆ ಸೂಪರ್ ಮಾರ್ಕೇಟ್ ಗೆ ತೆರಳಿದ್ದ ಇಬ್ಬರು ಮಹಿಳೆಯರು ಗಣೇಶ ಮೂರ್ತಿಗಳನ್ನು ಅಲ್ಲಿ ಇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರದಲ್ಲಿ ಇಬ್ಬರು ಮಹಿಳೆಯರ ಪೈಕಿ ಒಬ್ಬರು ಗಣೇಶ ಮೂರ್ತಿಗಳನ್ನು ಕೆಳಗೆ ಎಸೆದು ಒಡೆದು ಹಾಕಿದ್ದಾರೆ. ಮತ್ತೊಬ್ಬ ಮಹಿಳೆಯು ಈ ಘಟನೆಯ ವಿಡಿಯೋ ಮಾಡಿಕೊಂಡಿದ್ದಾರೆ.

ಮಹಿಳೆ, ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಾ, “ಇದು ಮುಸ್ಲಿಂ ದೇಶ” ಎಂದು ಹೇಳುವುದು ಕೇಳಿಬರುತ್ತದೆ. ರಾಯಲ್ ಸಲಹೆಗಾರಾದ ಅಹ್ಮದ್ ಅಲ್ ಖಲೀಫಾ ಈ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದರು.

ವಿಡಿಯೊ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ, ಶಾಪಿಂಗ್‌ ಮಾಲ್‌ಗೆ ಹಾನಿಗೊಳಿಸಿದ ಮತ್ತು ನಿರ್ದಿಷ್ಟ ಸಮುದಾಯವೊಂದರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ಪೊಲೀಸರು 54 ವರ್ಷದ ಮಹಿಳೆಯೊಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬಹ್ರೇನ್‌ನ ಸುದ್ದಿ ಮಾಧ್ಯಮ ‘ಗಲ್ಫ್‌ ಡೈಲಿ ನ್ಯೂಸ್‌’ ವರದಿ ಮಾಡಿದೆ.

 

2020ರಲ್ಲಿ ನಡೆದ ಈ ಘಟನೆ ನಡೆದ ವೇಳೆ ಮಹಿಳೆಯ ಕೃತ್ಯಕ್ಕೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಳೆಯ ವಿಡಿಯೊವನ್ನು ಗಣೇಶನ ಹಬ್ಬ ಮುಗಿದ ಸಂದರ್ಭದಲ್ಲಿ  ಹಂಚಿಕೊಳ್ಳುತ್ತಿದ್ದು ಇದರ ಉದ್ದೇಶ ಕೋಮು ಸಂಘರ್ಷ ಮತ್ತು ಕೋಮು ದ್ವೇಷ ಹರಡುವುದೇ ಆಗಿದೆ. ಎಲ್ಲ ಧರ್ಮಗಳಲ್ಲೂ ಧಾರ್ಮಿಕ ಮತಾಂದರು, ಮೂಲಭೂತವಾದಿಗಳು, ಅಸಹೀಷ್ಣುಗಳು ಇದ್ದೇ ಇರುತ್ತಾರೆ, ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿ ಸಮಾಜದ ಸ್ವಾಸ್ಥ್ಯ ಹಾಳುಗೆಡುಗುವ ಮುನ್ನ ಒಮ್ಮೆ ಯೋಚಿಸಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಜೀವಂತವಾಗಿರುವ BSF ಸೈನಿಕನನ್ನು’ ಹುತಾತ್ಮ’ ಎಂದು ಸುಳ್ಳು ಸುದ್ದಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights