ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ ಆಕ್ರೋಶ!

ಬಿಜೆಪಿ ನಾಯಕರು ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಆಕ್ರೋಶಗೊಂಡಿದ್ದಾರೆ.

ರಾಜ್ಯದ ಸಾವಿರಾರು ಜನರು ಕೋವಿಡ್‌ಗೆ ಬಲಿಯಾಗುತ್ತಿದ್ದಾಗ ನೆರವಿಗೆ ಬಾರದೇ ಅವಿತು ಕುಳಿತು ಈಗ ದಿಢೀರ್‌ ಪ್ರತ್ಯಕ್ಷರಾಗಿರುವ ಬಿಜೆಪಿ ನಾಯಕರು ಜನಾಶೀರ್ವಾದ ಯಾತ್ರೆಯ ಬದಲು ಹೆಣಾಶೀರ್ವಾದ ಯಾತ್ರೆ ಮಾಡುವುದು ಸೂಕ್ತ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಗದೀಶ್‌ ವಿ. ಸದಂ, “ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಬೆಡ್‌, ಆಕ್ಸಿಜನ್‌ ಕಲ್ಪಿಸುವುದನ್ನು ಸರ್ಕಾರ ನಿರ್ಲಕ್ಷಿಸಿತು. ಪರಿಣಾಮವಾಗಿ, ಮೂರು ಲಕ್ಷಕ್ಕೂ ಅಧಿಕ ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ವಿರೋಧಪಕ್ಷ ಹೇಳುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ ಕೋವಿಡ್‌ ಬುಲೆಟಿನ್‌ ಪ್ರಕಾರ ಆಗಸ್ಟ್‌ 2ರ ತನಕ 36 ಸಾವಿರ ಜನರು ಮೃತಪಟ್ಟಿದ್ದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿರುವ ಡೆತ್‌ ಆಡಿಟ್‌ನಲ್ಲಿ ಆಗಸ್ಟ್‌ 2ರ ತನಕ ಕೇವಲ 14,371 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಒಂದೊಂದು ಕಡೆ ಒಂದೊಂದು ಅಂಕಿಅಂಶ ಹೇಳುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗುತ್ತದೆ. ಸುತ್ತಮುತ್ತಲಿನ ಮನೆಗಳನ್ನು ಸಮೀಕ್ಷೆ ನಡೆಸಿದಾಗ ಹಾಗೂ ಮಾಧ್ಯಮಗಳ ವರದಿಗಳನ್ನು ಗಮನಿಸಿದಾಗ ಮೂರು ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿರುವ ಸುಳಿವು ಸಿಗುತ್ತಿದೆ. ಬಿಜೆಪಿ ನಾಯಕರು ಜನಾಶೀರ್ವಾದ ಹೆಸರಿನಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡುವ ಬದಲು ಹೆಣಾಶೀರ್ವಾದ ಹೆಸರಿನಲ್ಲಿ ಸ್ಮಶಾನಕ್ಕೆ ಹೋಗಿ, ನಿಜಕ್ಕೂ ಕೋವಿಡ್‌ನಿಂದ ಮೃತಪಟ್ಟ ಎಷ್ಟು ಶವಗಳು ಅಲ್ಲಿಗೆ ಬಂದಿವೆ ಎಂದು ವಿಚಾರಿಸಲಿ” ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ 20 ಎಸ್‌ಸಿ/ಎಸ್‌ಟಿ, 27 ಒಬಿಸಿ ಸಚಿವರಿದ್ದಾರೆ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ ಸತ್ಯವೇನೆಂದರೆ, ಅವರೆನ್ನಲ್ಲ ಕೇವಲ ನಾಮಕಾವಸ್ಥೆಗೆ ಸಚಿವರನ್ನಾಗಿ ಮಾಡಲಾಗಿದೆ. ಆ ಸಚಿವರ ಅಧಿಕಾರವನ್ನೆಲ್ಲಾ ಪ್ರಧಾನಿ ಮೋದಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಆ 47 ಸಚಿವರು ಸಣ್ಣ ಕಡತಕ್ಕೆ ಸಹಿ ಹಾಕಬೇಕಾದರೂ ಮೋದಿಯವರ ಅಪ್ಪಣೆ ಪಡೆಯಬೇಕಾಗಿದೆ. ಇನ್ನು ಅವರು ತಮ್ಮ ಸಮುದಾಯದ ಜನರ ಹಿತ ಕಾಪಾಡುವುದು ದೂರದ ಮಾತು. ಕಳೆದ ಏಳು ವರ್ಷಗಳಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಮೋದಿ ಏನು ಮಾಡಿದ್ದಾರೆ? ತೆಲಂಗಾಣ ಸರ್ಕಾರವು ಎಲ್ಲಾ ದಲಿತ ಕುಟುಂಬಗಳಿಗೆ 10 ಲಕ್ಷ ರೂಪಾಯಿ ನೀಡುವ ಯೋಜನೆ ಘೋಷಿಸಿದೆ. ಅಲ್ಲಿ ಸಾಧ್ಯವಾಗುವ ಇಂತಹ ಯೋಜನೆ ನಮ್ಮಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಕರ್ನಾಟಕ ಸರ್ಕಾರಕ್ಕೂ ದಲಿತರ ಮೇಲೆ ಕಾಳಜಿ ಇದ್ದರೆ ಅಂತಹದೇ ಯೋಜನೆ ಘೋಷಿಸಲಿ ಎಂದು ಜಗದೀಶ್‌ ವಿ. ಸದಂ ಆಗ್ರಹಿಸಿದರು.

ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುವಷ್ಟು ಹಣ ಸ್ವಿಸ್‌ ಬ್ಯಾಂಕ್‌ನಲ್ಲಿದ್ದು, ಅದನ್ನು ಭಾರತಕ್ಕೆ ತರುವುದಾಗಿ 2014ರಲ್ಲಿ ಬಿಜೆಪಿ ಹೇಳಿತ್ತು. ಇದನ್ನು ನಂಬಿ ಜನರು ಬಿಜೆಪಿಗೆ ಮತ ಚಲಾಯಿಸಿದ್ದರು. ಆದರೆ ಈಗ ಮಿನಿಮಮ್‌ ಬ್ಯಾಲೆನ್ಸ್‌ ಮೇಂಟೇನ್‌ ಮಾಡಲೂ ಕಷ್ಟಪಡುವಂತಹ ದುಃಸ್ಥಿತಿಗೆ ಜನರನ್ನು ಮೋದಿ ಸರ್ಕಾರ ತಂದಿದೆ. ಅಗತ್ಯ ವಸ್ತುಗಳ ಬೆಲೆ ದಿನದಿನಕ್ಕೆ ಏರುತ್ತಲೇ ಇದೆ. 80 ರೂಪಾಯಿಗೆ ಸಿಗುತ್ತಿದ್ದ ಅಡುಗೆ ಎಣ್ಣೆಯ ಬೆಲೆ 150 ರೂಪಾಯಿಗೂ ಅಧಿಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ತೆರಿಗೆಯನ್ನು ಏರಿಸಿದ್ದರಿಂದ ಭಾರತೀಯರು ಪೆಟ್ರೋಲ್‌, ಡೀಸೆಲ್‌ಗೆ ದುಬಾರಿ ಬೆಲೆ ತೆರಬೇಕಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ಗೆ 9 ರೂ. ಇದ್ದ ಕೇಂದ್ರ ಸರ್ಕಾರದ ತೆರಿಗೆಯನ್ನು ಮೋದಿ ಸರ್ಕಾರ ಹಂತಹಂತವಾಗಿ 32 ರೂ.ಗೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ (ಎಲ್‌ಪಿಜಿ) ಸಿಲೆಂಡರ್‌ ಸಬ್ಸಿಡಿಯನ್ನು ರದ್ದುಪಡಿಸಿದ್ದರಿಂದ 450 ರೂಪಾಯಿಗೆ ಜನರಿಗೆ ಸಿಗುತ್ತಿದ್ದ ಸಿಲೆಂಡರ್‌ಗೆ ಈಗ 900 ರೂಪಾಯಿ ಕೊಡಬೇಕಾಗಿದೆ ಎಂದು ಬಿಜೆಪಿಯನ್ನು ಜಗದೀಶ್‌ ವಿ. ಸದಂ ತರಾಟೆಗೆ ತೆಗೆದುಕೊಂಡರು.

ನೋಟು ಬದಲಾವಣೆಯಿಂದ ದೇಶಕ್ಕೆ ಭಾರೀ ಲಾಭವಾಗುತ್ತದೆ, ಕಪ್ಪುಹಣವೇ ಇಲ್ಲವಾಗುತ್ತದೆ ಎಂದು ನಂಬಿದ ಜನರು ಅಂದು ಕಷ್ಟಗಳನ್ನು ಸಹಿಸಿಕೊಂಡರು. ಆದರೆ ನೋಟು ಬದಲಾವಣೆಯಿಂದ ಎಷ್ಟು ಕಪ್ಪುಹಣ ನಾಶವಾಗಿದೆ ಎಂಬ ಮಾಹಿತಿಯನ್ನು ಆರ್‌ಬಿಐ ಈವರೆಗೂ ನೀಡಿಲ್ಲ. ಚುನಾವಣೆ ಬಂತೆಂದರೆ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ಸಾವಿರಾರು ರೂಪಾಯಿಯನ್ನು ಮನೆಮನೆಗೆ ಹಂಚುತ್ತವೆ. ಆಪರೇಷನ್‌ ಕಮಲದ ಹೆಸರಿನಲ್ಲಿ ಶಾಸಕರನ್ನು ಖರೀದಿಸಲು ನೂರಾರು ಕೋಟಿ ರೂಪಾಯಿಯನ್ನು ಬಿಜೆಪಿ ಖರ್ಚು ಮಾಡುತ್ತದೆ. ನೋಟು ಬದಲಾವಣೆ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಇವೆಲ್ಲ ಸಾರಿ ಸಾರಿ ಹೇಳುತ್ತಿವೆ ಎಂದು ಜಗದೀಶ್‌ ವಿ. ಸದಂ ಹೇಳಿದರು.

ಬಿಜೆಪಿಯ ದೇಶಪ್ರೇಮ, ಹಿಂದುತ್ವ ಕೇವಲ ಭಾಷಣಕ್ಕೆ ಹಾಗೂ ಗಲಭೆ ಸೃಷ್ಟಿಸುವುದಕ್ಕೆ ಸೀಮಿತ. “ಹಿಂದೂ ರಾಷ್ಟ್ರ” ಮಾಡುತ್ತೇವೆ ಎಂದು ಹೇಳಿದವರು “ಹಿಂದುಳಿದ ರಾಷ್ಟ್ರ” ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಹೆಚ್ಚುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಗಡಿಯಲ್ಲಿ ಈಗಲೂ ನಮ್ಮ ಯೋಧರು ಹುತಾತ್ಮರಾಗುತ್ತಿದ್ದರೂ ಸರ್ಜಿಕಲ್‌ ಸ್ಟ್ರೈಕ್‌ ಎಂಬ ಹಳೇ ಕಥೆಯನ್ನೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಗೋಶಾಲೆಗಳು ಅಕ್ರಮದ ಕೇಂದ್ರಬಿಂದುವಾಗಿದ್ದರೂ ಕೇಳುವವರು ಇಲ್ಲವಾಗಿದೆ. ಪಾಕಿಸ್ತಾನ ಸೇನೆಯಿಂದ ಬಂಧಿತರಾಗಿರುವ ಭಾರತದ ಪುತ್ರ ಕುಲಭೂಷಣ್‌ ಜಾಧವ್‌ರನ್ನು ಮರಳಿ ಕರೆತರುವುದರಲ್ಲೂ ಮೋದಿ ಸರ್ಕಾರ ವಿಫಲವಾಗಿದೆ. ಕೃಷಿ ಕಾಯಿದೆ, ಸಿಎಎ, ಎನ್‌ಆರ್‌ಸಿ ಮುಂತಾದವುಗಳಿಗೆ ತಿದ್ದುಪಡಿ ತಂದು ದೇಶದಲ್ಲಿ ಅಶಾಂತಿ ಸೃಷ್ಟಿಸಿದ್ದೇ ಕೇಂದ್ರ ಸರ್ಕಾರದ ಸಾಧನೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದ್ದರಿಂದ ಎಪಿಎಂಸಿಗಳಲ್ಲಿ ವಹಿವಾಟು ಕಡಿಮೆಯಾಗಿ ಮುಚ್ಚಿಹೋಗಲಿದೆ. ನಂತರ ಖಾಸಗಿಯವರು ಎಪಿಎಂಸಿಯ ಸ್ಥಾನದಲ್ಲಿ ಬಂದು ರೈತರಿಗೆ ಕಿರುಕುಳ ನೀಡಲಿವೆ ಎಂದು ಜಗದೀಶ್‌ ವಿ. ಸದಂ ಬೇಸರ ವ್ಯಕ್ತಪಡಿಸಿದರು.

ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ಪರಾರಿಯಾಗಿರುವ ನೀರವ್‌ ಮೋದಿ ಮತ್ತು ವಿಜಯ್‌ ಮಲ್ಯರನ್ನು ವಾಪಸ್‌ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರತಿ ಚುನಾವಣೆ ಬಂದಾಗಲೂ ನೀರವ್‌ ಹಾಗೂ ಮಲ್ಯ ಕೆಲವೇ ದಿನಗಳಲ್ಲಿ ಬರುತ್ತಾರೆಂದು ಸುಳ್ಳು ಸುದ್ದಿಯನ್ನು ಬಿಜೆಪಿ ಹಬ್ಬಿಸುತ್ತದೆ. ಆದರೆ ಅವರು ಮಾತ್ರ ಭಾರತೀಯರ ದುಡ್ಡಿನಿಂದ ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಜಗದೀಶ್‌ ವಿ.ಸದಂ ಆಕ್ರೊಶ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿಯ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‌ರವರು ಮಾತನಾಡಿ, “ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್‌ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದೆ. ಜನರಿಗೆ ಮಾತ್ರ ಬಿಗಿ ನಿಯಮಗಳನ್ನು ಜಾರಿಗೆ ತಂದು, ಸಚಿವರು ಮಾತ್ರ ಸ್ವೇಚ್ಛಾಚಾರದಿಂದ ಸಾವಿರಾರು ಬೆಂಬಲಿಗರನ್ನು ಸೇರಿಸುವುದು ಎಷ್ಟು ಸರಿ? ರಾಜ್ಯದಲ್ಲಿ ಬಿಜೆಪಿ ಸಚಿವರಿಗೇ ಒಂದು ಕಾನೂನು, ಸಾಮಾನ್ಯ ಜನರಿಗೆ ಮತ್ತೊಂದು ಕಾನೂನು ಎಂಬಂತಾಗಿದೆ. ಈ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದರೂ ಸಚಿವರುಗಳು ತಮ್ಮ ನಡೆಯನ್ನು ಬದಲಿಸಿಕೊಳ್ಳದಿರುವುದು ದುರಂತ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಸಂಭ್ರಮಿಸಿದಂತೆ ಯಾದಗಿರಿಯಲ್ಲಿ ಕೇಂದ್ರ ಸಚಿವ ಖೂಬಾ ಅಭಿಮಾನಿಗಳು ಬಂದೂಕಿನಿಂದ ಗುಂಡುಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ” ಎಂದು ಆಗ್ರಹಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights