ಫ್ಯಾಕ್ಟ್‌ಚೆಕ್: ನಿದ್ದೆಯಿಂದ ತಕ್ಷಣಕ್ಕೆ ಎದ್ದರೆ ಹೃದಯಾಘಾತ ಸಂಭವಿಸುವುದೇ?

ಸಾಮಾಜಿಕ ಮಾಧ್ಯಮದಲ್ಲಿ ಚಳಿಗೆ ಸಂಬಂಧಿಸಿದಂತೆ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು, ತೀವ್ರ ಚಳಿಯ ಕಾರಣಕ್ಕೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದ್ದು ಇದರಿಂದ ಪಾರಗಬೇಕೆಂದರೆ ಕೆಲವು ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕೆಂದು ತಿಳಿಸಿರುವ ಪೋಸ್ಟ್‌ವೊಂದು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಸಾಕಷ್ಟು ಪ್ರಸಾರವಾಗುತ್ತಿದೆ. ವೈರಲ್ ಪೋಸ್ಟ್‌ನಲ್ಲಿ ಏನು ಹೇಳಿದ್ದಾರೆ ಎಂದು ನೋಡೋಣ. ಡಾ. ದೀಪಾಲಿ, ಎಂಬ ಹೆಸರಿನಲ್ಲಿ ಈ ವಿವರಣೆ ನೀಡಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

“ಈ ತೀವ್ರ ಚಳಿಯಲ್ಲಿ 45 ವರ್ಷ ಮೇಲ್ಪಟ್ಟವರು ರಾತ್ರಿ 10 ಗಂಟೆಗೆ ಮಲಗಿದ ತಕ್ಷಣ ಏಳಬಾರದು ಎಂದು ಹೇಳುತ್ತಿದ್ದೇನೆ. ಏಕೆಂದರೆ ಶೀತದಿಂದ ದೇಹದ ರಕ್ತ ದಪ್ಪವಾಗುತ್ತದೆ, ನಂತರ ನಿಧಾನವಾಗಿ ಕೆಲಸ ಮಾಡುವುದರಿಂದ ಹೃದಯವನ್ನು ಸಂಪೂರ್ಣವಾಗಿ ತಲುಪಲು ಸಾಧ್ಯವಾಗದೆ ದೇಹವು ಹೊರಗುಳಿಯುತ್ತದೆ. ಈ ಕಾರಣಕ್ಕಾಗಿ, 40 ವರ್ಷ ವಯಸ್ಸಿನ ಜನರು ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟ ಜನರು ಚಳಿಗಾಲದ ತಿಂಗಳುಗಳಲ್ಲಿ ಹೃದಯ ಸ್ತಂಭನದಿಂದ ಹೆಚ್ಚಿನ ಸಂಖ್ಯೆಯ ಅಪಘಾತಗಳನ್ನು ಹೊಂದಿರುತ್ತಾರೆ, ಆದ್ದರಿಂದ ನಾವು ಅತ್ಯಂತ ಜಾಗರೂಕರಾಗಿರಬೇಕು. ನಾನು ಅದನ್ನೇ ಸೂಚಿಸುತ್ತೇನೆ.*

*ಬೆಳಿಗ್ಗೆ ಅಥವಾ ರಾತ್ರಿ ಮಲಗುವಾಗ ಮೂತ್ರ ವಿಸರ್ಜನೆ ಮಾಡಬೇಕಾದವರಿಗೆ ವಿಶೇಷ ಮಾಹಿತಿ!!*
ಈ ಮೂರೂವರೆ ನಿಮಿಷದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಜಾಗರೂಕರಾಗಿರಬೇಕು.

ಈ ಮೂರೂವರೆ ನಿಮಿಷಗಳು ಅಪಘಾತದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು.
ಅಂತಹ ಘಟನೆಗಳು ಸಂಭವಿಸಿದಾಗಲೆಲ್ಲಾ, ಪರಿಣಾಮವಾಗಿ ಆರೋಗ್ಯವಂತರು ಸಹ ರಾತ್ರಿಯಲ್ಲಿ ಸತ್ತಿದ್ದಾರೆ.
ಅಂತಹವರ ಬಗ್ಗೆ ನಾವು ನಿನ್ನೆಯಷ್ಟೇ ಮಾತನಾಡಿದ್ದೇವೆ ಎಂದು ಹೇಳುತ್ತೇವೆ. ಇದ್ದಕ್ಕಿದ್ದಂತೆ ಏನಾಯಿತು? ಅವರು ಹೇಗೆ ಸತ್ತರು?  ರಾತ್ರಿ ಮೂತ್ರ ಮಾಡಲು ಹೋಗುವಾಗ ನಾವು ಹಠಾತ್ತನೆ ಅಥವಾ ಆತುರದಿಂದ ಎದ್ದೇಳುವುದೇ ಇದಕ್ಕೆ ಮುಖ್ಯ ಕಾರಣ. ಇದರ ಪರಿಣಾಮವಾಗಿ ರಕ್ತವು ಮೆದುಳಿಗೆ ತಲುಪುವುದಿಲ್ಲ.

ಈ ಮೂರೂವರೆ ನಿಮಿಷಗಳು ಬಹಳ ಮುಖ್ಯ.

ನಾವು ಮೂತ್ರ ವಿಸರ್ಜನೆಗೆ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಾಗ, ನಮ್ಮ ಇಸಿಜಿ ಮಾದರಿಯು ಬದಲಾಗಬಹುದು. ಇದಕ್ಕೆ ಕಾರಣ ಹಠಾತ್ತನೆ ನಿಂತಾಗ ಮೆದುಳಿಗೆ ರಕ್ತ ಬರುವುದಿಲ್ಲ ಮತ್ತು ನಮ್ಮ ಹೃದಯದ ಕಾರ್ಯವು ನಿಲ್ಲುತ್ತದೆ.

ಮೂರೂವರೆ ನಿಮಿಷಗಳ ಪ್ರಯತ್ನವು ಉತ್ತಮ ಮಾರ್ಗವಾಗಿದೆ.

1. ನಿದ್ದೆಯಿಂದ ಏಳುವಾಗ ಹಾಸಿಗೆಯ ಮೇಲೆ ಅರ್ಧ ನಿಮಿಷ ಮಲಗಿ.*
2. ಮುಂದಿನ ಅರ್ಧ ನಿಮಿಷ ಹಾಸಿಗೆಯ ಮೇಲೆ ಕುಳಿತುಕೊಳ್ಳಿ.*
3. ಮುಂದಿನ ಎರಡೂವರೆ ನಿಮಿಷ ಕಾಲನ್ನು ಹಾಸಿಗೆಯ ಕೆಳಗೆ ತೂಗಾಡುವಂತೆ ಬಿಡಿ.*

ಮೂರೂವರೆ ನಿಮಿಷಗಳ ನಂತರ, ನಿಮ್ಮ ಮೆದುಳು ರಕ್ತವಿಲ್ಲದೆ ಉಳಿಯುವುದಿಲ್ಲ ಮತ್ತು ಹೃದಯದ ಕ್ರಿಯೆಯೂ ನಿಲ್ಲುವುದಿಲ್ಲ! ಇದರಿಂದ ಹಠಾತ್ ಸಾವುಗಳೂ ಕಡಿಮೆಯಾಗುತ್ತವೆ.
ನಿಮ್ಮ ಪ್ರೀತಿಪಾತ್ರರಿಗೆ ಪ್ರಯೋಜನವಾಗಬೇಕು, ಆದ್ದರಿಂದ ಅವರಿಗೆ ಅರಿವು ಮೂಡಿಸಲು ಇದನ್ನು ಪ್ರಸಾರ ಮಾಡಿ. ಕನಿಷ್ಠ10 ಜನರಿಗೆ ಪ್ರಸಾರ ಮಾಡಿ ಎಂಬ ಹೇಳಿಕೆಯೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಡಾ ದೀಪಾಲಿ ಎಂಬ ವೈದ್ಯರಿಂದ ಬಂದಿರುವ ಮಾಹಿತಿ ಎಂದು ಹಂಚಿಕೊಂಡಿರುವ ಈ ಪೋಸ್ಟ್‌ನಲ್ಲಿ ಹೇಳಿರುವಂತೆ ಚಳಿಗಾಲದಲ್ಲಿ ನಿದ್ದೆಯಿಂದ ತಕ್ಷಣಕ್ಕೆ ಎಚ್ಚರವಾದರೆ ಹೃದಯಾಘಾತ ಸಂಭವಿಸುತ್ತವೆ ಎಂಬುದು ನಿಜವೇ ಎಂದು ಪರಿಶೀಲಿಸೋಣ.

ತೀವ್ರ ಚಳಿಯಿಂದಾಗಿ ಹೃದಯಾಘಾತ ಸಂಭವಿಸುವುದು ನಿಜವೇ?

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಡಾ ದೀಪಾಲಿ ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಈ ಪೋಸ್ಟ್‌ ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಳಿಗಾಲದಲ್ಲಿ ಹೃದಯ ಸಂಬಂಧಿ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು ಎಂಬುದು ನಿಜ ಮತ್ತು ದೇಹವನ್ನು ಹೆಚ್ಚು ಬೆಚ್ಚಗೆ ಇಡುವ ಮೂಲಕ ಕೆಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸತ್ಯ. ಆದರೆ ಈ ಮೇಲಿನ ಮಾಹಿತಿ ಸಂಪೂರ್ಣ ಸತ್ಯವಲ್ಲ ಎಂದು ಹೇಳುತ್ತಾರೆ ಹೃದಯ ತಜ್ಞರು.

ಮೇಲಿನ ಮಾಹಿತಿಯ ಬ್ಗಗೆ ಪರಿಶೀಲಿಸಲು ಹೃದ್ರೋಗ ತಜ್ಞರನ್ನು ಸಂಪರ್ಕಿಸಿದಾಗ ವೈರಲ್ ಆಗಿರುವ ಮಾಹಿತಿ ಕುರಿತು ಹಳುವುದು ಹೀಗೆ..,  ಈ ವೈರಲ್ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವುದು ಒಂದು ವಾರದಿಂದ ಅಲ್ಲ. ವರ್ಷಗಳಿಂದ ಓಡಾಡುತ್ತಿದೆ. ಮಲಗಿದವರು ತಕ್ಷಣ ಎದ್ದು ಬಿಡಬಾರದು ಎಂಬುದು ನಿಜ. ಅದರಲ್ಲೂ ರಾತ್ರಿಯ ಹೊತ್ತು, ನಿದ್ದೆಯಲ್ಲಿದ್ದವರು. ಮೂತ್ರ ವಿಸರ್ಜನೆಗೆಂದು ಹೋದಾಗ ಕೆಲವರು ತಲೆ ತಿರುಗಿ ಬೀಳುವುದುಂಟು, ಅದನ್ನು micturition syncope ಎನ್ನುತ್ತಾರೆ.

ಆದರೆ ಅದರಿಂದ ಹೃದಯಾಘಾತವಾಗಿ ಸಾವು ಸಂಭವಿಸುತ್ತದೆ ಎಂದು ಹೇಳಲು, ಅದರಲ್ಲೂ ಈ ಮೆಸೇಜ್‌ನಲ್ಲಿ ವಿವರಿಸಿರುವ ಹಾಗೆ ರಕ್ತ ನಿಧಾನವಾಗಿರುತ್ತದೆ, ಹೆಪ್ಪುಗಟ್ಟಿರುತ್ತದೆ, ಎಂಬುದಕ್ಕೆ ಹೆಚ್ಚು ತರ್ಕವಿಲ್ಲ. ಎಂದು ಹೇಳಿದ್ದಾರೆ.

ಚಳಿ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆಯೇ?

ಕಳೆದ ಒಂದು ವಾರದಲ್ಲಿ ಸ್ವಲ್ಪ ಹೆಚ್ಚು ಚಳಿ ಕಾಣಿಸಿಕೊಂಡಿದ್ದರಿಂದ ಈ ಬಾರಿ ಚಳಿ ಹೆಚ್ಚಾಗಿದೆ ಎಂದು ಜನಸಾಮಾನ್ಯರ ನೆಲೆಯಲ್ಲಿ ಚರ್ಚೆಯಾಗುತ್ತಿದ್ದವು, ಇದರಿಂದ ಈ ಮೇಲಿಸ ಮೆಸೇಜ್‌ಅನ್ನು ಓದಿದವರು ಹೆಚ್ಚು ಭಯ ಭೀತರಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಏನೋ ಅನಾಹುತ ಆಗುತ್ತದೆ ಎಂಬ ಆತಂಕಕ್ಕೆ ಒಳಗಾಗುವ ಸಾಧ್ಯತೆ ಹಚ್ಚಿರುವುದರಿಂದ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳುವುದು ಹೀಗೆ..

ರಾಜ್ಯದಲ್ಲಿ ಈ ಬಾರಿಯ ಮುಂಗಾರು ಹಾಗೂ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ವಾತಾವರಣದಲ್ಲಿ ತೇವಾಂಶವೂ ಆಧಿಕವಾಗಿದೆ. ಬಹಳಷ್ಟು ಕಡೆ ಬೆಳಗಿನ ಜಾವ ಸಾಕಷ್ಟು ಇಬ್ಬನಿಯೂ ಬೀಳುತ್ತಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಡಿಸೆಂಬರ್ವರೆಗೂ ಮಳೆ ಮುಂದುವರೆದಿದೆ. ಇದರಿಂದಾಗಿ ಜನವರಿಯಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಮಕರ ಸಂಕ್ರಾಂತಿ ಹಬ್ಬದ ವರೆಗೂ ಮಾಗಿಯ ಚಳಿಯ ತೀವ್ರತೆ ಹೆಚ್ಚಾಗಿರಲಿದೆ. ಆ ನಂತರ ಚಳಿಯ ಪ್ರಮಾಣ ಇಳಿಕೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

 ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 13-ರಿಂದ 16 ಡಿಗ್ರಿ ಸೆಲ್ಸಿಯಸ್ ವರೆಗೆ ಮತ್ತು ಗರಿಷ್ಠ ತಾಪಮಾನ 26-28 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ವಾರ ಕನಿಷ್ಠ ತಾಪಮಾನ ಮತ್ತಷ್ಟು ಇಳಿಕೆಯಾಗುವ ಸಂಭವ ಹೆಚ್ಚಾಗಿದೆ. ಇದರಿಂದ ಸಂಜೆ, ರಾತ್ರಿ ಹಾಗೂ ಬೆಳಿಗ್ಗೆ ಚಳಿ ಹೆಚ್ಚಾಗಲಿದೆ.

ನವೆಂಬರ್ ನಿಂದ ಚಳಿಗಾಲ ಆರಂಭವಾಗಿದ್ದರೂ ಈತನಕ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚು ಚಳಿ ಕಂಡುಬಂದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಚಳಿಯ ಪ್ರಮಾಣವನ್ನು ನಿಖರವಾಗಿ ಹೇಳಲಾಗದು. ಸ್ಥಳದಿಂದ ಸ್ಥಳಕ್ಕೆ ತಾಪಮಾನದಲ್ಲಿ ವ್ಯತ್ಯಾಸವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಕಾಣಬಹುದು. ಎಲ್ಲ ಪ್ರದೇಶದಲ್ಲೂ ಒಂದೇ ರೀತಿ ಇರುವುದಿಲ್ಲ. ಬೆಂಗಳೂರಲ್ಲಿ ಬಡಾವಣೆಯಿಂದ ಬಡಾವಣೆಗೆ ವ್ಯತ್ಯಾಸ ಕಾಣಬಹದು. ನಾನಾ ಕಾರಣಗಳಿಂದ ತಾಪಮಾನದಲ್ಲಿ ಏರಿಳಿತವನ್ನು ಗಮನಿಸಬಹುದಾಗಿದೆ ಎಂದರು.

ಈ ವರ್ಷ ಸರಾಸರಿ ಪ್ರಮಾಣಕ್ಕಿಂತ ಚಳಿಯ ಪ್ರಮಾಣ ಹೆಚ್ಚಾದಂತೆ ಅನ್ನಿಸುತ್ತಿಲ್ಲ. ಸಾಮಾನ್ಯ ಪ್ರಮಾಣದ ಚಳಿ ಮುಂದುವರೆಯಲಿದೆ. ತೀವ್ರವಾದ ಚಳಿ ಕಂಡುಬರುವ ಲಕ್ಷಣಗಳು ಇದುವರೆಗೂ ಕಂಡುಬಂದಿಲ್ಲ ಎಂದು ಹೇಳಿದರು.

ಚಳಿಗಾಲ ನವೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿಯ ವೇಳೆಗೆ ಮುಕ್ತಾಯವಾದರೂ, ಚಂಡ ಮಾರುತ, ವಾಯುಭಾರ ಕುಸಿತ ಹಾಗೂ ಮೈಲ್ಮೈ ಸುಳಿಗಾಳಿಗಳಿಂದಾಗಿ ಹಿಂಗಾರು ಮಳೆ ಡಿಸೆಂಬರ್ ವರೆಗೂ ಮುಂದುವರೆದಿತ್ತು. ಅಲ್ಲದೆ, ಪದೇ ಪದೇ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಮೈ ಕೊರೆಯುವ ಚಳಿಯ ತೀವ್ರತೆಯ ಅನುಭವ ಉಂಟಾಗಿತ್ತು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತೀವ್ರ ಚಳಿಯಿಂದ ಈ ವ್ಯಕ್ತಿ ಸಾವನಪ್ಪಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights