ವೀಕೆಂಡ್ ಕರ್ಫ್ಯೂ ಜಾರಿ ಇದ್ದರೂ ಹಿಂಡಲಗಾ ಗಣಪತಿ ದೇವಸ್ಥಾನ ಓಪನ್ : ವಿನಯ್ ಕುಲಕರ್ಣಿ ಭೇಟಿ!
ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಇದ್ದರೂ ಹಿಂಡಲಗಾ ಗಣಪತಿ ದೇವಸ್ಥಾನ ತೆರೆಯಲಾಗಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಜಿ ಸಚಿವ ವಿನಯ್ ಕುಲಕರ್ಣಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಜಾನಾಕ್ರೋಶಕ್ಕೆ ಗುರಿಯಾಗಿದೆ.
ಸಾಮಾನ್ಯವಾಗಿ ಕರ್ಫ್ಯೂ ಜಾರಿಯಾದ್ರೆ ದೇವಸ್ಥಾನಗಳನ್ನು ತೆರೆಯುವಂತಿಲ್ಲ. ಆದರೆ ವಿನಯ್ ಕುಲಕರ್ಣಿ ಬಿಡುಗಡೆ ಸಡಗರದಲ್ಲಿ ಬೆಂಬಲಿಗರು ದೇವಸ್ಥಾನವನ್ನು ತೆರೆಸಿದ್ದಾರೆ. ಮಾತ್ರವಲ್ಲದೇ ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ನೂರಾರು ಬೆಂಬಲಿಗರು ಜೈಲಿನ ಬಳಿ ಸೆರೆದು ಬೃಹತ್ ಸೇಬಿನ ಹಾರ ಹಾಕಿ, ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿ, ಐಷಾರಾಮಿ ಕಾರುಗಳ ಮೂಲಕ ರೋಡ್ ಶೋ ಮಾಡಿ ಹಿಂಡಲಗಾ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದ್ದಾರೆ.
ಈ ವೇಳೆ ಯಾವೊಬ್ಬ ಬೆಂಬಲಿಗರೂ ಮಾಸ್ಕ್ ಹಾಕಿರಲಿಲ್ಲ. ದೈಹಿಕ ಅಂತರ ಕಾಯ್ದುಕೊಂಡಿರಲಿಲ್ಲ. ಸ್ವತ: ವಿನಯ್ ಕುಲಕರ್ಣಿ ಮಾಸ್ಕ್ ಹಾಕದೆ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಇಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದರೂ ಯಾವೊಬ್ಬ ಪೊಲೀಸರು ಪ್ರಶ್ನೆ ಮಾಡಿಲ್ಲ. ಬದಲಿಗೆ ಮೆರವಣಿಗೆಗೆ ಬೆಂಗಾವಲಾಗಿ ಪೊಲೀಸರು ಹೆಜ್ಜೆ ಹಾಕಿದ್ದಾರೆ. ಪೊಲೀಸರ ನಿರ್ಲಕ್ಷ್ಯಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
ಸಾಮಾನ್ಯ ಜನರ ಕೊರೊನಾ ನಿಯಮ ಮೀರಿದರೆ ದಂಡ ಕಟ್ಟಬೇಕು. ಆದರೆ ವಿನಯ್ ಕುಲಕರ್ಣಿ ಅದ್ಧೂರಿ ಸ್ವಾಗತಕ್ಕೆ ಯಾರು ಹೊಣೆ. ಯಾರಿಗೆ ದಂಡ ಹಾಕ್ತಾರೆ ಎಂದು ಪ್ರಶ್ನಿಸಲಾಗುತ್ತಿದೆ. ಕರ್ಫ್ಯೂ ವೇಳೆ ಜನರನ್ನು ದೇವಸ್ಥನದ ಒಳಗೆ ಬಿಡುವುದಿರಲಿ ದೇವಸ್ಥಾನ ತೆರೆಯಲೂ ಅವಕಾಶವಿಲ್ಲ. ವಿನಯ್ ಕುಲಕರ್ಣಿಗೆ ಮಾತ್ರ ಹೇಗೆ ದೇವಸ್ಥಾನ ತೆರೆಯಲಾಯಿ ಎಂದು ಪ್ರಶ್ನಿಸಲಾಗುತ್ತಿದೆ. ಜೈಲಿನ ಮುಂದೆ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ರೂ ಪೊಲೀಸರು ಯಾಕೆ ಕೈಕಟ್ಟಿ ಕುಳಿತಿದ್ರು?
ಯುದ್ಧ ಗೆದ್ದು ಬಂದಂತೆ ವಿನಯ್ ಕುಲಕರ್ಣಿಗೆ ಸ್ವಾಗತ ಮಾಡುತ್ತಿದ್ದರೆ ಯಾಕೆ ಜಿಲ್ಲಾಡಳಿತ ತಡೆಯೋ ಪ್ರಯತ್ನ ಮಾಡಿಲ್ಲಾ ಎನ್ನುವ ಪ್ರಶ್ನೆಗೆ ಜನಸಾಮಾನ್ಯರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯ ಮಾಡೋ ರಾಜ್ಯ ಸರ್ಕಾರವೇ ಉತ್ತರ ನೀಡಬೇಕು.