ಆಡಳಿತ ಪಕ್ಷಗಳ ಪರವಾಗಿ ಪೊಲೀಸರು ಕೆಲಸ ಮಾಡುವುದು ಆಘಾತಕಾರಿ: ಸುಪ್ರೀಂ ಕೋರ್ಟ್‌

ವಿವಿಧ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷಗಳ ಪರವಾಗಿ ಪೊಲೀಸ್ ಅಧಿಕಾರಿಗಳು ಕೆಲಸ ಮಾಡುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ವಿವಿಧ ರಾಜ್ಯಗಳಲ್ಲಿ ರಾಜಕೀಯ ಪ್ರೇರಿತ ತನಿಖೆಗಳ ಕುರಿತು ಆರೋಪಗಳು ಕೇಳಿ ಬರುತ್ತಿವೆ. ಆಡಳಿತಾರೂಢ ಪಕ್ಷಗಳ ಪರವಾಗಿ ನಿಲ್ಲಲು ಬಯಸುವ ಪೊಲೀಸ್ ಅಧಿಕಾರಿಗಳು ಅವರ ರಾಜಕೀಯ ಎದುರಾಳಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ಆಘಾತಕಾರಿಯಾಗಿದೆ, ಪೊಲೀಸರು ಕಾನೂನಿನ ನಿಯಮಕ್ಕೆ ಬದ್ಧರಾಗಿರಬೇಕು ಎಂದು ಸಿಜೆಐ ಎನ್‌ವಿ ರಮಣ ನೇತೃತ್ವದ ನ್ಯಾಯಪೀಠ ಹೇಳಿದೆ.

ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಅಮಾನತುಗೊಂಡ ಛತ್ತೀಸಗಡ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ ಇಂತಹ ಬೆಳವಣಿಗೆಗಳಿಗೆ ಪೊಲೀಸರನ್ನು ಹೊಣೆಗಾರರನ್ನಾಗಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 70 ಲಕ್ಷ ಲಂಚಕ್ಕೆ ಬೇಡಿಕೆ; ಕಂದಾಯ ಇಲಾಖೆ ಉನ್ನತಾಧಿಕಾರಿ ಬಂಧನ!

ಅಲ್ಲದೆ, ತಮ್ಮ ವಿರುದ್ಧ ಭ್ರಷ್ಟಾಚಾರ ಮತ್ತು ಸಂಚಿನ ಆರೋಪಗಳಡಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಛತ್ತೀಸಗಡದ 1994ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ತಾವು ಹತ್ತಿರವಾಗಿದ್ದಂತೆ ಕಾಣಿಸಿದ್ದ ಕಾರಣ ಕಾಂಗ್ರೆಸ್ ಸರ್ಕಾರ ತಮ್ಮ ಮೇಲೆ ಆರೋಪಗಳನ್ನು ಹೊರಿಸಿದೆ ಎಂದು ಅವರು ದೂರಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಹೊಸ ಪಕ್ಷವೊಂದು ಅಧಿಕಾರಕ್ಕೆ ಬಂದಾಗ ಸರ್ಕಾರವು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತದೆ. ಇದನ್ನು ತಡೆಯುವ ಅಗತ್ಯವಿದೆ ಎಂದಿದೆ.

ಗುರ್ಜಿಂದರ್ ಪಾಲ್ ಸಿಂಗ್ ಆದಾಯದ ಮೂಲಗಳ ಮೊತ್ತಕ್ಕಿಂತಲೂ ಅಧಿಕ ಆದಾಯ ಹೊಂದಿದ್ದಾರೆ ಎಂಬ ಆರೋಪಗಳೂ ಇವೆ. ಈ ಹಿನ್ನೆಲೆಯಲ್ಲಿ 2021ರ ಜನವರಿಯಲ್ಲಿ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಇದೀಗ ಗುರ್ಜಿಂದರ್ ಸುಪ್ರೀಂ ಮೆಟ್ಟಿಲೇರಿದ್ದು, ಅವರನ್ನು ಬಂಧಿಸಬಾರದು ಎಂದು ಛತ್ತೀಸಗಡ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ಬಿಜೆಪಿ ಪರ ಪ್ರಚಾರಕ್ಕೆ ಹೋದರೆ ಜನ ಉಗಿಯುತ್ತಾರೆ: ಶಿವಮೊಗ್ಗದಲ್ಲಿ ಬಿಜೆಪಿ ಅಧ್ಯಕ್ಷ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights