ಚಾಮರಾಜನಗರದಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ಬಿಗ್ ಶಾಕ್ ಕೊಟ್ಟ ಜಿಲ್ಲಾಧಿಕಾರಿ!
ಚಾಮರಾಜನಗರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಜಿಲ್ಲಾಧಿಕಾರಿ ಎಂಆರ್ ರವಿ ಬಿಗ್ ಶಾಕ್ ಕೊಟ್ಟಿದ್ದಾರೆ.
ಹೌದು.. ಕೊರೊನಾ ಮೂರನೇ ಅಲೆಯ ಭೀತಿಯ ಮಧ್ಯೆ ಕೊರೊನಾ ಲಸಿಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಕೊರೊನಾತಂಕ ಮುಂದುವರೆದಿದ್ದು ಚಾಮರಾಜನಗರದಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ರೇಷನ್, ಪಿಂಚಣಿ ಕೊಡುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ನೋ ವ್ಯಾಕ್ಸಿನ್, ನೋ ರೇಷನ್, ನೋ ಪಿಂಚಣಿ ಆದೇಶ ಹೊರಡಿಸಲಾಗಿದೆ.
ಚಾಮರಾಜನಗರದಲ್ಲಿ 2 ಲಕ್ಷದ 20 ಸಾವಿರ ಜನ ಪಡಿತರಿದ್ದಾರೆ. ಇವರಿಗೆ ಪಡಿತರ ಸೌಲಭ್ಯ ಸಿಗಬೇಕು ಅಂದರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ. ಸೆಪ್ಟಂಬರ್ 1 ರಿಂದ ಈ ಆದೇಶ ಜಾರಿಯಲ್ಲಿರಲಿದ್ದು ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎನ್ನುವ ಸದುದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.
ಈಗಾಗಲೇ 40 ಲಕ್ಷ ಮಂದಿಗೆ (ಶೇ.70) ವ್ಯಾಕ್ಸಿನ್ ಆಗಿದೆ. ಸುಮಾರು 10 ಲಕ್ಷ ಜನರಿಗೆ ವ್ಯಾಕ್ಸಿನ್ ಆಗಬೇಕಿದೆ. ಬುಡಗಟ್ಟು ಜನರು ಹೆಚ್ಚಾಗಿರುವ ಚಾಮರಾಜನಗರದಲ್ಲಿ ಲಸಿಕೆ ಬಗ್ಗೆ ಭಯವಿದೆ. ನಿರೀಕ್ಷೆಯಂತೆ ಲಸಿಕೆ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಚರ್ಚಿಸಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿತ್ತು ಎಂದು ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿ ಎಂಆರ್ ರವಿ ತೀರ್ಮಾನದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡಮಂಡಲವಾಗಿದ್ದಾರೆ. “ಬಿಜೆಪಿ ಸರ್ಕಾರ ಆಡಳಿತಕ್ಕೆ ನಾಚಿಕೆ ಆಗಬೇಕು. ಆಕ್ಸಿಜನ್ ಪೂರೈಸದೆ 36 ಜನರನ್ನು ಬಲಿ ಪಡೆದಿದ್ದಾರೆ. ಆಗ ಅಲರ್ಟ್ ಆಗದೇ ಈಗ ರೇಷನ್ ಕೊಡಲ್ಲ ಎಂದು ಜನರನ್ನು ಹೆದರಿಸುತ್ತಿದ್ದೀರಿ” ಎಂದು ಗರಂ ಆಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಡಿಕೆಶಿ, “ಜನರಿಗೆ ಲಸಿಕೆ ಬಗ್ಗೆ ನೀವೆಷ್ಟು ಮನವೊಲಿಸಿದ್ದೀರಿ? ಭಯದ ವಾತವರಣ ನಿರ್ಮಾಣ ಮಾಡಿ ಮೂಲಸೌಲಭ್ಯ ಕೊಡುವುದಿಲ್ಲ ಎನ್ನುವುದು ಎಷ್ಟು ಸರಿ” ಎಂದು ಪ್ರಶ್ನಿಸಿದ್ದಾರೆ.

