ಬಂಗಾಳ: ಬಿಜೆಪಿ ಶಾಸಕ ಸೌಮೆನ್ ರಾಯ್ ಟಿಎಂಸಿಗೆ ಸೇರ್ಪಡೆ!
ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಸೌಮೆನ್ ರಾಯ್ ಅವರು ಬಿಜೆಪಿ ತೊರೆದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಂಗಾಳದ ಕಲಿಯಗಂಜ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸೌಮೆನ್ ರಾಯ್ ಈ ಹಿಂದೆ ಟಿಎಂಸಿ ಪಕ್ಷದ ಸದಸ್ಯರಾಗಿದ್ದರು. ಈಗ ಮತ್ತೆ ಟಿಎಂಸಿಗೆ ಮರಳಿದ್ದಾರೆ. ಅವರು ಬಂಗಾಳದ ಸಂಸ್ಕೃತಿ ಮತ್ತು ಪರಂಪರೆಯನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುತ್ತಾರೆ ಎಂದು ಟಿಎಂಸಿ ನಾಯಕ ಪಾರ್ಥ ಚಟರ್ಜಿ ಹೇಳಿದ್ದಾರೆ.
ಶಾಸಕ ಸೌಮೆನ್ ರಾಯ್ ಟಿಎಂಸಿಗೆ ಸೇರಿರುವುದರಿಂದ, ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿಯ ಸಂಖ್ಯೆ 71 ಕ್ಕೆ ಇಳಿದಿದೆ. ಅಲ್ಲದೆ, ಕಳೆದ ನಾಲ್ಕು ವಾರಗಳಲ್ಲಿ ನಾಲ್ಕು ಬಿಜೆಪಿ ಶಾಸಕರು ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.
ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವುದಾಗಿ ಇಂದು ಘೋಷಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ವಿರುದ್ದ ಸ್ಪರ್ಧಿಸಿ ಸೋಲುಂಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಸೆಪ್ಟೆಂಬರ್ 30 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ರಾಜಸ್ಥಾನ ಸ್ಥಳೀಯ ಚುನಾವಣೆ: 231 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಮುನ್ನಡೆ; ಬಿಜೆಪಿಗೆ 185 ಸ್ಥಾನಗಳು!

