ಬ್ರಾಹ್ಮಣರನ್ನು ವೋಲ್ಗಾ ನದಿಯ ದಡಕ್ಕೆ ಓಡಿಸಬೇಕು: ಸಿಎಂ ತಂದೆ ವಿರುದ್ದ ಎಫ್‌ಐಆರ್‌; ಕಾನೂನಿಗಿಂತ ಯಾರೂ ಮೇಲಲ್ಲ ಎಂದ ಛತ್ತೀಸ್‌ಘಡ ಸಿಎಂ!

ಬ್ರಾಹ್ಮಣರು ವಿದೇಶಿಯರು. ಬ್ರಾಹ್ಮಣರನ್ನು ಬಹಿಷ್ಕರಿಸಬೇಕು. ಹಳ್ಳಿಗಳಲ್ಲಿಯೂ ಅವರಿಗೆ ಪ್ರವೇಶ ನೀಡಬಾರದು ಎಂದು ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಿಎಂ ಬಘೇಲ್ ಅವರ ತಂದೆ ನಂದ್ ಕುಮಾರ್ ಬಘೇಲ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಹೇಳಿದ್ದಾರೆ.

ಬ್ರಾಹ್ಮಣರನ್ನು ಬಹಿಷ್ಕರಿಸಬೇಕು, ಬ್ರಾಹ್ಮಣರನ್ನು ನಿಮ್ಮ ಗ್ರಾಮಗಳಿಗೆ ಪ್ರವೇಶಿಸಲು ಬಿಡಬೇಡಿ ಎಂದು ಭಾರತದ ಎಲ್ಲ ಗ್ರಾಮಸ್ಥರನ್ನು ನಾನು ಒತ್ತಾಯಿಸುತ್ತೇನೆ. ಅವರನ್ನು ಬಹಿಷ್ಕರಿಸಲು ನಾನು ಇತರ ಎಲ್ಲ ಸಮುದಾಯದವರೊಂದಿಗೆ ಮಾತನಾಡುತ್ತೇನೆ. ಅವರನ್ನು ವೋಲ್ಗಾ ನದಿಯ ದಡಕ್ಕೆ ವಾಪಸ್ ಕಳುಹಿಸಬೇಕು ಎಂದು ನಂದ್ ಕುಮಾರ್ ಬಘೇಲ್ ಕರೆ ಕೊಟ್ಟಿದ್ದರು.

ಅವರ ಹೇಳಿಕೆಯ ವಿರುದ್ದ ಸರ್ವ ಬ್ರಾಹ್ಮಣ ಸಮಾಜ ದೂರು ನೀಡಿದ್ದು, ಡಿಡಿ ನಗರ ಪೊಲೀಸರು ನಂದ ಕುಮಾರ್ ಬಘೇಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ 505 (1) (ಬಿ) (ಎಚ್ಚರಿಕೆಯನ್ನು ನೀಡುವ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಭೂಪೇಶ್ ಬಘೇಲ್, “ಅವರು ನನ್ನ ತಂದೆಯಾಗಿದ್ದರೂ ಯಾರೂ ಕೂಡ ಕಾನೂನಿಗಿಂತ ಮೇಲಲ್ಲ. ಛತ್ತೀಸ್‌ಗಡ ಸರಕಾರವು ಪ್ರತಿಯೊಂದು ಧರ್ಮ, ಪಂಗಡ, ಸಮುದಾಯ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ. ನನ್ನ ತಂದೆಯಾದ ನಂದ್ ಕುಮಾರ್ ಬಘೇಲ್ ಅವರ ನಿರ್ದಿಷ್ಟ ಸಮುದಾಯದ ವಿರುದ್ಧದ ಟೀಕಾತ್ಮಕ ಹೇಳಿಕೆಯು ಕೋಮು ಶಾಂತಿಗೆ ಭಂಗ ತಂದಿದೆ. ಅವರ ಹೇಳಿಕೆಯಿಂದ ನನಗೂ ದುಃಖವಾಗಿದೆ “ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯೋಗಿ ಸರ್ಕಾರಕ್ಕೆ ಸೆಡ್ಡು: ಮುಜಾಫರ್‌ನಗರದಲ್ಲಿ ಬೃಹತ್‌ ರೈತ ಮಹಾಪಂಚಾಯತ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights