NEP ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲ; ನಾಗ್ಪುರ ಶಿಕ್ಷಣ ನೀತಿ: ಡಿಕೆ ಶಿವಕುಮಾರ್‌

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಕರ್ನಾಟಕದಲ್ಲಿಯೇ ಮೊದಲು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇದಕ್ಕಾಗಿ ತಯಾರಿಗಳೂ ನಡಯುತ್ತಿವೆ. ಸಂಸತ್ತಿನಲ್ಲಿ ಚರ್ಚೆಯೇ ಆಗದೇ ಅಂಗೀಕಾರವಾಗಿರುವ ಎನ್‌ಇಪಿ ವಿರುದ್ದ ಕಾಂಗ್ರೆಸ್‌ ಕಿಡಿಕಾರಿದ್ದು, ಎನ್‌ಇಪಿ ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ, ನಾಗ್ಪುರ ಶಿಕ್ಷಣ ನೀತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಅದರ ಬಗ್ಗೆ ರಾಷ್ಟ್ರಾದ್ಯಂತ ಚರ್ಚೆ ಆಗಬೇಕು. ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚಿಸಬೇಕು. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಆದರೆ, ಇದಾವುದೂ ನಡೆದಿಲ್ಲ. ತರಾತುರಿಯಲ್ಲಿ ಕೇಂದ್ರ ಸರ್ಕಾರ ಎನ್‌ಇಪಿಯನ್ನು ಅಂಗೀಕರಿಸಿದೆ, ರಾಜ್ಯದಲ್ಲಿ ಇದರ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ನಾನು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದೇನೆ. ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಟ್ರಸ್ಟಿಯಾಗಿದ್ದೇನೆ. ಈ ನೂತನ ಶಿಕ್ಷಣ ನೀತಿ ಏನು, ಅದರಿಂದ ಆಗುವ ಪ್ರಯೋಜನೆಗಳೇನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ನನ್ನಿಂದಲೇ ಸಾಧ್ಯವಾಗುತ್ತಿಲ್ಲ. ಇನ್ನು ಜನಸಾಮಾನ್ಯರು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: NEP ಕರ್ನಾಟಕದಲ್ಲೇ ಮೊದಲು ಜಾರಿ; ಶಿಕ್ಷಣ ಮಾರಾಟಕ್ಕೆ ಕರ್ನಾಟಕವೇ ಬಲಿಪಶು ಎಂದು ಕೆವಿಎಸ್‌ ವಿರೋಧ!

ಏಕಾಏಕಿ ಈ ನೀತಿ ಜಾರಿಗೊಳಿಸುತ್ತೇವೆ ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿರುವುದರಿಂದ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರೂ ಗಾಬರಿ ಬಿದ್ದಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಈ ನೀತಿ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್, ಶಿಕ್ಷಣ ಸಂಸ್ಥೆಗಳು, ಪೋಷಕರು, ಶಿಕ್ಷಕರ ಮಟ್ಟದಲ್ಲಿ ಸಂಪೂರ್ಣವಾಗಿ ಚರ್ಚೆಯಾಗುವವರೆಗೂ ಈ ನೀತಿ ಜಾರಿಯನ್ನು ತಡೆ ಹಿಡಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ನೀತಿಯಲ್ಲಿ ಕೆಲವು ಉತ್ತಮ ಅಂಶಗಳು ಇರಬಹುದು. ಆದರೆ, ಈ ನೀತಿಯಲ್ಲಿ ತ್ರಿಭಾಷಾ ಸೂತ್ರ ಪರಿಚಯಿಸುವ ಮೂಲಕ ಹಿಂಬಾಗಿಲಿನಿಂದ ಹಿಂದಿ ಭಾಷೆ ಹೇರಿಕೆಗೆ ಪ್ರಯತ್ನಿಸಲಾಗುತ್ತಿದೆ. ಈ ವಿಚಾರವಾಗಿ ಕನ್ನಡಪರ ಸಂಘಟನೆಗಳು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಇದೇ ನೀತಿಯನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ನಲ್ಲಿ ಯಾಕೆ ಜಾರಿತರಲು ಪ್ರಯತ್ನಿಸುತ್ತಿಲ್ಲ. ಕೇರಳ ಹಾಗೂ ತಮಿಳುನಾಡಿನಲ್ಲಿ ಇದರ ವಿಚಾರದಲ್ಲಿ ಮಾತು ಕೂಡ ಆಡುವ ಸ್ಥಿತಿ ಇಲ್ಲ. ಮಾತನಾಡಿದರೆ, ಅಲ್ಲಿನ ಜನ ಬಡಿಯುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ.

ಈ ನೀತಿಯಲ್ಲಿ ವಿದ್ಯಾರ್ಥಿ ಪದವಿ ಅವಧಿಯಲ್ಲಿ ಎರಡು ಮೂರು ವಿಷಯಗಳನ್ನು ವಿದ್ಯಾಭ್ಯಾಸ ಮಾಡಬಹುದಂತೆ. ಇದು ಹೇಗೆ ಸಾಧ್ಯ? ಇದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆಯೇ? ಸರ್ಕಾರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಟ್ಯಾಬ್ ಒದಗಿಸಿದೆಯೇ? ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಲು ರಾಜ್ಯಾದ್ಯಂತ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಿದೆಯೇ? ಏನನ್ನೂ ಮಾಡದೇ ತರಾತರಿಯ ಜಾರಿ ರಾಜ್ಯದಲ್ಲಿ ಹಿಂದಿ ಹೇರಿಕೆಯ ಹುನ್ನಾರವನ್ನು ಹೊಂದಿದೆ ಎಂದು ಡಿಕೆ ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಇದನ್ನೂ ಓದಿ: ಹಿಂದುಳಿದವರನ್ನು ಹೊರಗಿಟ್ಟಿದ್ದ 2000 ವರ್ಷಗಳ ಹಿಂದಿನ ಶಿಕ್ಷಣ ಪದ್ದತಿಯ ಸವಕಲು NEP: ಮಲ್ಲಿಕಾರ್ಜುನ ಖರ್ಗೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights