ಅಸ್ಸಾಂನಲ್ಲಿ ಎರಡು ದೋಣಿಗಳ ಮದ್ಯೆ ಡಿಕ್ಕಿ : ಓರ್ವ ಮೃತ : 20 ಮಂದಿ ನಾಪತ್ತೆ!
ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು 20 ಮಂದಿ ನಾಪತ್ತೆಯಾಗಿದ್ದಾರೆ.
ಬುಧವಾರ ಅಸ್ಸಾಂನ ಜೋರ್ಹತ್ ನ ಬ್ರಹ್ಮಪುತ್ರ ನದಿಯಲ್ಲಿ ‘ಮಾ ಕಮಲ’ ಎಂಬ ಖಾಸಗಿ ದೋಣಿ ನಿಮತಿ ಘಾಟ್ನಿಂದ ಮಜುಲಿಗೆ ಹೋಗುತ್ತಿದ್ದಾಗ ಮತ್ತು ಸರ್ಕಾರಿ ಸ್ವಾಮ್ಯದ ದೋಣಿ ‘ಟ್ರಿಪ್ಕೈ’ ಮಜುಲಿಯಿಂದ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ ಸಂಜೆ 4.30 ರ ಸುಮಾರಿಗೆ ಘಟನೆ ಸಂಭವಿಸಿದೆ. ಘಟನೆಯಲ್ಲಿ ಎಷ್ಟು ಜನರು ಸತ್ತಿದ್ದಾರೆ ಎಂದು ನಾವು ಈಗಲೇ ಹೇಳಲು ಸಾಧ್ಯವಿಲ್ಲ ಜೋರ್ಹತ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡಿಕ್ಕಿ ಹೊಡೆದ ದೋಣಿಯಲ್ಲಿ 120 ಪ್ರಯಾಣಿಕರಿದ್ದರು ಎನ್ನಲಾಗುತ್ತಿದ್ದು, ದೋಣಿ ಮುಳುಗಿ ಒಬ್ಬರು ಮೃತಪಟ್ಟು, 20 ಮಂದಿ ನಾಪತ್ತೆಯಾಗಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಞಾನೇಂದ್ರ ತ್ರಿಪಾಠಿ ತಿಳಿಸಿದಂತೆ ಮೃತ ಮಹಿಳೆ ನದಿಯಿಂದ ರಕ್ಷಿಸಿದ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. “ಸುಮಾರು 15-20 ಜನರು ಕಾಣೆಯಾಗಿದ್ದಾರೆ ಎಂದು ನಮಗೆ ವರದಿಗಳಿವೆ. NDRF ಮತ್ತು SDRF ನ ಹಲವಾರು ತಂಡಗಳು ಸೇನೆ ಮತ್ತು ಪ್ಯಾರಾ ಡೈವರ್ಗಳ ಬೆಂಬಲದೊಂದಿಗೆ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ” ಎಂದು ಅವರು ಹೇಳಿದರು.
“ಮುಖಾಮುಖಿ ಡಿಕ್ಕಿಯಿಂದ ನದಿಯಲ್ಲಿ ಬೋಟುಗಳು ಮಗುಚಿ ಬಿದ್ದವು. ಇಲ್ಲಿಯವರೆಗೆ 100 ಜನರನ್ನು ರಕ್ಷಿಸಲಾಗಿದೆ” ಎಂದು ASDMA ಸಿಇಒ ಜಿಡಿ ತ್ರಿಪಾಠಿ ತಿಳಿಸಿದರು.
ಅಸ್ಸಾಂನಲ್ಲಿ ನಡೆದ ದೋಣಿ ದುರಂತದ ಬಗ್ಗೆ ಪ್ರಧಾನಮಂತ್ರಿ ತಲ್ಲಣ ವ್ಯಕ್ತಪಡಿಸಿದ್ದು ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಟ್ವಿಟ್ ಮಾಡಿದ್ದಾರೆ.
“ಅಸ್ಸಾಂನಲ್ಲಿ ನಡೆದ ದೋಣಿ ಅಪಘಾತದಿಂದ ಬೇಸರವಾಗಿದೆ. ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.